SK Home Ad
Home ಸುದ್ದಿ ರಾಜ್ಯ ಭಾಷಣದ ಬದಲು ಗಾಯನದ ಗೌರವ: ಪೌರಕಾರ್ಮಿಕರಿಗಾಗಿ ಸಚಿವರ ಭಾವಗೀತೆ

ಭಾಷಣದ ಬದಲು ಗಾಯನದ ಗೌರವ: ಪೌರಕಾರ್ಮಿಕರಿಗಾಗಿ ಸಚಿವರ ಭಾವಗೀತೆ

0
63

ದಾವಣಗೆರೆ: ಪ್ರತಿನಿತ್ಯ ನಗರದ ಸ್ವಚ್ಛತೆಗಾಗಿ ಬೆವರು ಸುರಿಸಿ, ಕೊಳಕು-ಕಸವನ್ನೂ ಲೆಕ್ಕಿಸದೆ ದುಡಿಯುವ ಪೌರಕಾರ್ಮಿಕರ ಮುಖದಲ್ಲಿ ಮಂದಹಾಸ ಮೂಡಿಸುವ ಕ್ಷಣವದು. ವೇದಿಕೆಯಲ್ಲಿ ಸಚಿವರೊಬ್ಬರು ಭಾಷಣ ಮಾಡಲಿಲ್ಲ; ಬದಲಿಗೆ ಮೈಕ್ ಹಿಡಿದು ಭಾವಗೀತೆಯೊಂದನ್ನು ಹಾಡಿ, ತಮ್ಮದೇ ಧ್ವನಿಯಲ್ಲಿ ಪೌರಕಾರ್ಮಿಕರ ಮನತಣಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಸರ್ಕಾರದ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಅವರು ಪ್ರಸಿದ್ಧ ಭಾವಗೀತೆ ‘ಒಳಿತು ಮಾಡು ಮನುಷ್ಯ, ನೀನಿರುವುದು ಮೂರು ದಿವಸ…’ ಹಾಡುವ ಮೂಲಕ ಗಮನ ಸೆಳೆದರು.

ವೇದಿಕೆಯಲ್ಲಿ ಮೈಕ್ ಹಿಡಿದ ಸಚಿವ ಬಸವಂತಪ್ಪ ಅವರು ಭಾವಪೂರ್ಣವಾಗಿ ಹಾಡು ಹಾಡುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಪೌರಕಾರ್ಮಿಕರು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಸಚಿವರ ಸುಶ್ರಾವ್ಯ ಧ್ವನಿಗೆ ಸಭಾಂಗಣವೇ ಕೆಲಕಾಲ ಮೌನವಾಗಿ ಕಿವಿಗೊಟ್ಟಿತು. ಹಾಡು ಮುಗಿಯುತ್ತಿದ್ದಂತೆ ಚಪ್ಪಾಳೆಯ ಮೂಲಕ ಮೆಚ್ಚುಗೆ ವ್ಯಕ್ತವಾಯಿತು.

ಪೌರಕಾರ್ಮಿಕರ ಶ್ರಮಕ್ಕೆ ಗಾಯನದ ಗೌರವ: ನಗರ-ಪಟ್ಟಣಗಳ ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ಜವಾಬ್ದಾರಿಯನ್ನು ಹೊತ್ತು ಹಗಲಿರುಳು ಶ್ರಮಿಸುವ ಪೌರಕಾರ್ಮಿಕರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿದಿನ ಬೆಳಗ್ಗೆಯೇ ಜನರು ಎದ್ದೇಳುವ ಮುನ್ನವೇ ಬೀದಿಗಿಳಿದು ಕಸ ಸಂಗ್ರಹಿಸುವ, ಸ್ವಚ್ಛಗೊಳಿಸುವ ಹಾಗೂ ನಗರದ ಸ್ವಾಸ್ಥ್ಯ ಕಾಪಾಡುವ ಈ ಕಾರ್ಮಿಕರ ಶ್ರಮಕ್ಕೆ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲಾಯಿತು.

ಇಂತಹ ಸಂದರ್ಭದಲ್ಲಿ ಸಚಿವ ಬಸವಂತಪ್ಪ ಅವರು ‘ಒಳಿತು ಮಾಡು ಮನುಷ್ಯ’ ಹಾಡಿನ ಮೂಲಕ ‘ಮನುಷ್ಯನಾಗಿ ಬದುಕಿರುವಷ್ಟು ದಿನ ಇತರರಿಗೆ ಒಳಿತು ಮಾಡಬೇಕು’ ಎಂಬ ಸಂದೇಶವನ್ನು ಸಾರಿದ್ದು, ಕಾರ್ಯಕ್ರಮಕ್ಕೆ ಭಾವನಾತ್ಮಕ ಸ್ಪರ್ಶ ನೀಡಿತು.