SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಅಸ್ತು: ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಆಟೋ-ಟ್ಯಾಕ್ಸಿ ಸಂಘಟನೆಗಳು!

ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಅಸ್ತು: ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಆಟೋ-ಟ್ಯಾಕ್ಸಿ ಸಂಘಟನೆಗಳು!

0
32

ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ, ರಾಜ್ಯದ 5 ಪ್ರಮುಖ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಮೋಟಾರ್ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಹಾಗೂ ಕಾಂಟ್ರಾಕ್ಟ್ ಕ್ಯಾರೇಜ್‌ಗಳಾಗಿ ಕಾರ್ಯಾಚರಣೆ ನಡೆಸಲು ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸುವಂತೆ ಹೈಕೋರ್ಟ್ ಕಳೆದ ಜನವರಿ 23ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ನಾಡಪ್ರಭು ಕೆಂಪೇಗೌಡ ಆಟೋ ಚಾಲಕರ ಸಂಘಟನೆ, ಕರ್ನಾಟಕ ವೆಂಕಟೇಗೌಡ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಗ್ರೇಟರ್ ಬೆಂಗಳೂರು ಚಾಲಕರ ಸಂಘ, ಕರ್ನಾಟಕ ಸಾರಥಿಗಳ ಮಹಾಸಂಘ ಹಾಗೂ ಜೈ ಕರ್ನಾಟಕ ಸಾರಥಿ ಸೇನೆ ಟ್ರಸ್ಟ್ ಜಂಟಿಯಾಗಿ ಈ ಮೇಲ್ಮನವಿ ಅರ್ಜಿ ಸಲ್ಲಿಸಿವೆ. ಸಾರಿಗೆ ನೀತಿ ರೂಪಿಸುವುದು ರಾಜ್ಯ ಸರ್ಕಾರ ಮತ್ತು ಸಾರಿಗೆ ಪ್ರಾಧಿಕಾರಗಳ ವ್ಯಾಪ್ತಿಗೆ ಬರುತ್ತದೆ. ಆ್ಯಪ್ ಆಧಾರಿತ ಕಂಪನಿಗಳ (ಅಗ್ರಿವೇಟರ್) ಹಿತಾಸಕ್ತಿಗೆ ತಕ್ಕಂತೆ ನಿಯಮ ರೂಪಿಸಲು ಹೈಕೋರ್ಟ್ ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಬೆಂಗಳೂರಿನಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಆಟೋ ಹಾಗೂ ಟ್ಯಾಕ್ಸಿ ಚಾಲಕರಿದ್ದು, ಸೂಕ್ತ ನಿಯಂತ್ರಣಾತ್ಮಕ ಚೌಕಟ್ಟಿಲ್ಲದೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿದರೆ ಲಕ್ಷಾಂತರ ಚಾಲಕರ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ.