ಬೆಂಗಳೂರು: ವಿಧಾನಸಭೆ ಕಲಾಪ ಮುಗಿಸಿ ವಿಧಾನಸೌಧದಿಂದ ಹೊರಡುತ್ತಿದ್ದ ವೇಳೆ, ತಮ್ಮ ಕಾರನ್ನು ಅಲ್ಲಿಂದ ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಭದ್ರತಾ ಉಸ್ತುವಾರಿ ಡಿಸಿಪಿ ಯೋಗೇಶ್ ಅವರ ವಿರುದ್ಧ ಗರಂ ಆದ ಘಟನೆ ನಡೆದಿದೆ.
ಕಲಾಪ ಮುಗಿಸಿ ಕಾವೇರಿ ನಿವಾಸಕ್ಕೆ ತೆರಳಲು ಸಿದ್ದರಾಮಯ್ಯ ಅವರು ಪಶ್ಚಿಮ ದ್ವಾರದ (ಕೆಂಗಲ್ ಹನುಮಂತಯ್ಯ ಗೇಟ್) ಮೆಟ್ಟಿಲುಗಳನ್ನು ಇಳಿದು ಹೊರಬಂದಾಗ, ಅವರ ಕಾರು ಅಲ್ಲಿ ಇರಲಿಲ್ಲ. ವಿಚಾರಿಸಿದಾಗ ಡಿಸಿಪಿ ಯೋಗೇಶ್ ಅವರ ಸೂಚನೆಯಂತೆ ಕಾರನ್ನು ಪಾರ್ಕಿಂಗ್ ಸ್ಥಳಕ್ಕೆ ಕಳುಹಿಸಿರುವುದು ತಿಳಿದುಬಂದಿದೆ.
ಇದರಿಂದ ಸಿದ್ದರಾಮಯ್ಯ ವಿಧಾನಸೌಧದ ಕೆಂಗಲ್ ಗೇಟ್ ಬಳಿ ಕಾರಿಗಾಗಿ ಕೆಲ ಕಾಲ ಕಾಯಬೇಕಾಗಿ ಬಂದಿದ್ದರಿಂದ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನಗೊಂಡರು. ತಕ್ಷಣವೇ ಸ್ಥಳದಲ್ಲಿದ್ದ ಡಿಸಿಪಿ ಯೋಗೇಶ್ ಅವರನ್ನು ಹತ್ತಿರ ಕರೆದ ಸಿದ್ದರಾಮಯ್ಯ, ಸಾರ್ವಜನಿಕರು ಹಾಗೂ ಸಿಬ್ಬಂದಿಯ ಸಮ್ಮುಖದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡರು.
“ನನ್ನ ಕಾರನ್ನು ಇಲ್ಲಿಂದ ಯಾಕೆ ತೆಗೆಸಿದೆ” ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅಧಿಕಾರಿಗಳ ನಡವಳಿಕೆಯ ಬಗ್ಗೆ ಎಚ್ಚರಿಕೆ ನೀಡಿದರು. “ನಿನ್ನ ಮೇಲೆ ಬಹಳ ಆರೋಪಗಳಿವೆ. ವಿಧಾನಸೌಧಕ್ಕೆ ಬರುವ ಜನಪ್ರತಿನಿಧಿಗಳು ಹಾಗೂ ಶಾಸಕರನ್ನು ನೀನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಸಾಲು ಸಾಲು ದೂರುಗಳು ಬಂದಿವೆ” ಎಂದು ಗರಂ ಆದರು. “ಜನಪ್ರತಿನಿಧಿಗಳ ಜೊತೆ ನಡೆದುಕೊಳ್ಳುವ ರೀತಿ ಇದಲ್ಲ. ಇನ್ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು” ಎಂದು ಡಿಸಿಪಿಗೆ ಎಚ್ಚರಿಕೆ ನೀಡಿದರು.
ಇಡೀ ಘಟನೆಯಿಂದಾಗಿ ಕೆಲ ಕಾಲ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಶಾಸಕ ಶರತ್ ಬಚ್ಚೇಗೌಡ ಅವರೊಂದಿಗೆ ಅಲ್ಲಿಗೆ ಬಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೂಡಾ ಘಟನೆಯ ಮಾಹಿತಿ ಪಡೆದುಕೊಂಡರು. ಡಿಸಿಪಿಯನ್ನು ಕರೆಸಿ ಅವರು ಕೂಡಾ ತರಾಟೆಗೆ ತೆಗೆದುಕೊಂಡಿದ್ದಾರೆ.



















