ಉಡುಪಿ: ಶಾರ್ಜಾದಲ್ಲಿ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಬರ್ಬರವಾಗಿ ಹತ್ಯೆಯಾಗಿದ್ದಾರೆ ಎಂದು ಆರೋಪಿಸಿ ಅವರ ಸಹೋದರ ಅನಿಲ್ ಪ್ರಕಾಶ್ ಕುಂದರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಅನಿಲ್ ಪ್ರಕಾಶ್ ಅವರು ದೃಶ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಸಹೋದರನ ಸಾವಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಲ್ವಿನ್ ಪ್ರಕಾಶ್ ಕುಂದರ್ ಅವರು ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದು, ಅಲ್ಲಿಯೇ ಬರ್ಬರ ಹತ್ಯೆಗೀಡಾಗಿದ್ದಾರೆ ಎಂಬ ಮಾಹಿತಿ ಕುಟುಂಬಕ್ಕೆ ಲಭಿಸಿದೆ ಎಂದು ತಿಳಿದುಬಂದಿದೆ. ಘಟನೆಯ ನಿಖರ ಕಾರಣ ಹಾಗೂ ಹತ್ಯೆಯ ಸಂದರ್ಭದ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಈ ಸಂಬಂಧ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಆದರೆ, ಶಾರ್ಜಾದಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ಈ ಘಟನೆಯ ಕುರಿತು ಉಡುಪಿ ಪೊಲೀಸರಿಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎಸ್‌ಪಿ ಹರಿರಾಮ್ ಶಂಕರ್, ಅಲ್ವಿನ್ ಪ್ರಕಾಶ್ ಕುಂದರ್ ಅವರ ಹತ್ಯೆ ಕುರಿತು ಯಾವುದೇ ದೂರು, ಪ್ರಕರಣದ ಅಧಿಕೃತ ಮಾಹಿತಿ ಅಥವಾ ಶಾರ್ಜಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಅಲ್ವಿನ್ ಅವರ ಸಾವಿನ ಕುರಿತಾಗಿ ಕುಟುಂಬದವರು ನೀಡಿರುವ ಮಾಹಿತಿಯ ಸತ್ಯಾಸತ್ಯತೆ ಹಾಗೂ ಘಟನೆಯ ನೈಜ ಸ್ವರೂಪ ಇನ್ನಷ್ಟೇ ದೃಢಪಡಬೇಕಿದೆ. ಶಾರ್ಜಾ ಅಧಿಕಾರಿಗಳು ಅಥವಾ ಭಾರತೀಯ ರಾಯಭಾರಿ ಕಚೇರಿಯಿಂದ ಅಧಿಕೃತ ಮಾಹಿತಿ ಬಂದ ಬಳಿಕವಷ್ಟೇ ಪ್ರಕರಣದ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ.
ಅಲ್ವಿನ್ ಅವರ ಕುಟುಂಬಸ್ಥರು ಘಟನೆ ಕುರಿತು ಆತಂಕ ವ್ಯಕ್ತಪಡಿಸಿದ್ದು, ಶಾರ್ಜಾದಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರಕರಣದ ಸತ್ಯಾಸತ್ಯತೆ ಬಹಿರಂಗಪಡಿಸುವಂತೆ ಮನವಿ ಮಾಡಿದ್ದಾರೆ.



















