SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಶೋಷಿತ ನಾಯಕರಿಗೆ ಸೂಕ್ತ ಪ್ರಾತಿನಿಧ್ಯ ಸಿಗಲು ದಶಕಗಳೇ ಬೇಕಾಯಿತು

ಶೋಷಿತ ನಾಯಕರಿಗೆ ಸೂಕ್ತ ಪ್ರಾತಿನಿಧ್ಯ ಸಿಗಲು ದಶಕಗಳೇ ಬೇಕಾಯಿತು

0
56

ದಾವಣಗೆರೆ: ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅನೇಕ ನಾಯಕರು ಮುಖ್ಯಮಂತ್ರಿಗಳಾಗಿದ್ದರೂ, ಶೋಷಿತ ಸಮುದಾಯಗಳ ನಾಯಕರಿಗೆ ಸೂಕ್ತ ಪ್ರಾತಿನಿಧ್ಯ ಹಾಗೂ ಸ್ಥಾನಮಾನ ದೊರೆಯಲು ದಶಕಗಳೇ ಬೇಕಾಯಿತು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.

ದಾವಣಗೆರೆಯ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಸಚಿವರು ಮತ್ತು ಶಾಸಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

2018ರವರೆಗಿನ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಹಲವು ಚುನಾವಣೆಗಳು ನಡೆದಿದ್ದು, ವಿವಿಧ ಸಮುದಾಯಗಳ ನಾಯಕರು ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಶೋಷಿತ ಸಮುದಾಯಗಳ ನಾಯಕರಿಗೆ ಅಧಿಕಾರದ ಉನ್ನತ ಸ್ಥಾನಗಳಲ್ಲಿ ಸೂಕ್ತ ಅವಕಾಶ ದೊರೆಯುವುದು ಸುಲಭವಾಗಿರಲಿಲ್ಲ ಎಂದು ಹೇಳಿದರು.

ಬಸವಲಿಂಗಪ್ಪ, ಕೆ.ಎಚ್. ರಂಗನಾಥ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಂತಹ ದಕ್ಷ ಮತ್ತು ಬುದ್ಧಿವಂತ ನಾಯಕರ ಕೊಡುಗೆಯನ್ನು ಸ್ಮರಿಸಿದ ಅವರು, ಅಂತಹ ನಾಯಕರಿಗೂ ಉಪಮುಖ್ಯಮಂತ್ರಿ ಸ್ಥಾನ ಪಡೆಯಲು ಅವಕಾಶ ದೊರೆಯಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ತಮಗೆ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ನೀಡಿದೆ ಎಂದರು.

‘ನೊಂದವರ ಪರ ಧ್ವನಿ’: “ನಾನು ಕೇವಲ ದಲಿತ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮಾಜದಲ್ಲಿ ಯಾರು ನೊಂದಿದ್ದಾರೋ, ಯಾರು ತುಳಿತಕ್ಕೆ ಒಳಗಾಗಿದ್ದಾರೋ ಹಾಗೂ ಯಾರನ್ನು ಸಮಾಜ ನಿರ್ಲಕ್ಷಿಸುತ್ತಿದೆಯೋ ಅವರ ಪರವಾಗಿ ಧ್ವನಿ ಎತ್ತಲು ನಾನು ಸದಾ ಇರುತ್ತೇನೆ” ಎಂದು ಡಾ. ಪರಮೇಶ್ವರ್ ಹೇಳಿದರು.