SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಪೌರಕಾರ್ಮಿಕರ ಪ್ರಶಸ್ತಿಗೆ ‘ಬಿ. ಬಸವಲಿಂಗಪ್ಪ’ ಹೆಸರಿಡಿ

ಪೌರಕಾರ್ಮಿಕರ ಪ್ರಶಸ್ತಿಗೆ ‘ಬಿ. ಬಸವಲಿಂಗಪ್ಪ’ ಹೆಸರಿಡಿ

0
30

ದಾವಣಗೆರೆ: ಮಲ ಹೊರುವ ಪದ್ಧತಿ ನಿರ್ಮೂಲನೆ ಹಾಗೂ ಪೌರಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ಕ್ರಾಂತಿಕಾರಿ ನಾಯಕ ಬಿ. ಬಸವಲಿಂಗಪ್ಪ ಅವರ ಹೆಸರನ್ನು ರಾಜ್ಯ ಸರ್ಕಾರ ನೀಡುವ ‘ಪೌರಕಾರ್ಮಿಕರ ಪ್ರಶಸ್ತಿ’ಗೆ ನಾಮಕರಣ ಮಾಡಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಉಪ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.

ದಾವಣಗೆರೆಯ ಬಿಇಐಡಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಸಚಿವರು ಮತ್ತು ಶಾಸಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿ. ಬಸವಲಿಂಗಪ್ಪ ಅವರು ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ, ಮಲ ಹೊರುವ ಪದ್ಧತಿ ನಿರ್ಮೂಲನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಸೇವೆ ಮತ್ತು ಹೋರಾಟವನ್ನು ಸ್ಮರಿಸುವ ನಿಟ್ಟಿನಲ್ಲಿ ಪೌರಕಾರ್ಮಿಕರ ಪ್ರಶಸ್ತಿಗೆ ಅವರ ಹೆಸರಿಡುವುದು ಸೂಕ್ತ ಎಂದು ಬಸವಂತಪ್ಪ ಹೇಳಿದರು.

ಸಮುದಾಯದ ಹಿರಿಯ ನಾಯಕರಾದ ರಂಗನಾಥ್ ಹಾಗೂ ಬಿ. ಬಸವಲಿಂಗಪ್ಪ ಅವರ ಸಾಮಾಜಿಕ ಕೊಡುಗೆಗಳನ್ನು ಮುಖಂಡರು ಸ್ಮರಿಸಿದರು. ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಉನ್ನತ ಸಾಧನೆ ಮಾಡುವಂತೆ ಕರೆ ನೀಡಿದರು.

ಪೌರಕಾರ್ಮಿಕರ ಶೋಷಣೆಗೆ ಆಕ್ರೋಶ: ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆ ಪೌರಕಾರ್ಮಿಕರ ಶೋಷಣೆ ಮತ್ತು ಲೂಟಿ ನಡೆಯುತ್ತಿದ್ದು, ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಪೌರಕಾರ್ಮಿಕರಿಗೆ ಅನ್ಯಾಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅವರಿಗೆ ಸರ್ಕಾರದಿಂದ ಅಗತ್ಯ ಬೆಂಬಲ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.