SK Home Ad
Home ಸುದ್ದಿ ರಾಜ್ಯ ಸಿದ್ದರಾಮಯ್ಯ ಪ್ರತಿಮೆ ತೆರವು ಗದ್ದಲ: ಕಲಬುರಗಿ ಚಲೋಗೆ ಕರೆ ನೀಡಿದ ಅಭಿಮಾನಿಗಳು, ತೆರವು ಸಮರ್ಥಿಸಿಕೊಂಡಿ ಪ್ರಿಯಾಂಕ್...

ಸಿದ್ದರಾಮಯ್ಯ ಪ್ರತಿಮೆ ತೆರವು ಗದ್ದಲ: ಕಲಬುರಗಿ ಚಲೋಗೆ ಕರೆ ನೀಡಿದ ಅಭಿಮಾನಿಗಳು, ತೆರವು ಸಮರ್ಥಿಸಿಕೊಂಡಿ ಪ್ರಿಯಾಂಕ್ ಖರ್ಗೆ!

0
34

ಕಲಬುರಗಿಯ ಹೈಕೋರ್ಟ್ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂಬತ್ತು ಅಡಿ ಎತ್ತರದ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿರುವುದು ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಕಲ್ಯಾಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಅಭಿಮಾನಿಗಳು ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ಪ್ರತಿಮೆಯನ್ನು ನಿಯಮಬಾಹಿರ ಎಂಬ ಕಾರಣ ನೀಡಿ ಬೆಳಗಿನ ಜಾವವೇ ತೆರವುಗೊಳಿಸಲಾಗಿದ್ದು, ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಸಮುದಾಯದ ಮುಖಂಡರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಮೆ ತೆರವು ಖಂಡಿಸಿ ಕಲಬುರಗಿಯ ಜಗತ್ ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಖಂಡರು, ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು. ಈ ಹಿಂದೆ ಹೈಕೋರ್ಟ್ ವೃತ್ತಕ್ಕೆ ಸಿದ್ದರಾಮಯ್ಯ ಹೆಸರಿಡಲು ತೀರ್ಮಾನಿಸಲಾಗಿದ್ದ ಬೋರ್ಡ್ ಅನ್ನೂ ತೆರವುಗೊಳಿಸಲಾಗಿದೆ ಎಂದು ಆಪಾದಿಸಿದ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಎರಡು ದಿನಗಳಲ್ಲಿ ಪ್ರತಿಮೆ ಮರುಸ್ಥಾಪಿಸದಿದ್ದರೆ ರಾಜ್ಯವ್ಯಾಪಿ ‘ಕಲಬುರಗಿ ಚಲೋ’ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಅವರು, ಈ ತೆರವು ಕಾರ್ಯಾಚರಣೆಯ ಹಿಂದೆ ಸರ್ಕಾರದ ಪ್ರಭಾವಿ ನಾಯಕರ ಕೈವಾಡವಿದೆ ಎಂದು ನೇರ ಆರೋಪ ಮಾಡಿದರು.

ಮತ್ತೊಂದೆಡೆ, ಜಿಲ್ಲಾಡಳಿತ ಹಾಗೂ ಪಾಲಿಕೆಯ ಕ್ರಮವನ್ನು ಸಚಿವ ಪ್ರಿಯಾಂಕ್ ಖರ್ಗೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ‘ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಲು ಕಾನೂನುಬದ್ಧ ಅನುಮತಿ ಅತ್ಯಗತ್ಯ. ನಿಯಮಗಳನ್ನು ಉಲ್ಲಂಘಿಸಿ ರಾತ್ರೋರಾತ್ರಿ ಅನಧಿಕೃತವಾಗಿ ಪ್ರತಿಮೆ ಇಡುವುದು ಸ್ವತಃ ಸಿದ್ದರಾಮಯ್ಯ ಅವರ ಘನತೆಗೆ ಮಾಡುವ ಅಪಮಾನ. ಇಂತಹ ಕಾನೂನುಬಾಹಿರ ನಡವಳಿಕೆಯನ್ನು ಸ್ವತಃ ಸಿದ್ದರಾಮಯ್ಯ ಅವರೇ ಒಪ್ಪುವುದಿಲ್ಲ. ಸೂಕ್ತ ಪರವಾನಗಿ ಪಡೆದು ಗೌರವಯುತವಾಗಿ ಪ್ರತಿಮೆ ಸ್ಥಾಪಿಸಲಿ’ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಕಾನೂನು ಪಾಲನೆ ಮತ್ತು ಅಭಿಮಾನಿಗಳ ಭಾವನೆಗಳ ನಡುವಿನ ಈ ಸಂಘರ್ಷ ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರ ಈ ಬಿಕ್ಕಟ್ಟನ್ನು ಹೇಗೆ ನಿಭಾಯಿಸಲಿದೆ ಎಂಬ ಕುತೂಹಲ ಮೂಡಿಸಿದೆ.