
ವಿಶ್ವ ಕೌಶಲ್ಯ ಸ್ಪರ್ಧೆಗೆ ಧಾರವಾಡದ ಇಬ್ಬರು ಯುವ ಪ್ರತಿಭೆಗಳು; ಚೀನಾದಲ್ಲಿ ಭಾರತ ಪ್ರತಿನಿಧಿಸಲಿರುವ ಚರಣ್–ಸಿದ್ಧಾರೂಢ್
ಹುಬ್ಬಳ್ಳಿ: ಜಾಗತಿಕ ಕೌಶಲ್ಯ ವೇದಿಕೆಯಲ್ಲಿ ಧಾರವಾಡದ ಕೀರ್ತಿ ಮತ್ತೊಮ್ಮೆ ಮೊಳಗುವಂತಾಗಿದೆ. ರಾಯಾಪುರದಲ್ಲಿರುವ ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC)ನ ಇಬ್ಬರು ಯುವ ಪ್ರತಿಭೆಗಳು ಚೀನಾದ ಶಾಂಘೈನಲ್ಲಿ ನಡೆಯಲಿರುವ WorldSkills Competition 2026ರಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
GTTC ಧಾರವಾಡದ ವಿದ್ಯಾರ್ಥಿಗಳಾದ ಚರಣ್ ಎ.ಎಸ್. ಅವರು ಕಾಟ್ರಾನಿಕ್ಸ್ (Mechatronics) ವಿಭಾಗದಲ್ಲಿ ಹಾಗೂ ಸಿದ್ಧಾರೂಢ ಕಳ್ಳಿಹಾಳ್ ಅವರು CNC Milling ವಿಭಾಗದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ.
ಕೌಶಲ್ಯದ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಒಂದಾಗಿರುವ WorldSkills Competition ಅನ್ನು ಸಾಮಾನ್ಯವಾಗಿ ‘ಕೌಶಲ್ಯದ ಒಲಿಂಪಿಕ್ಸ್’ ಎಂದು ಕರೆಯಲಾಗುತ್ತದೆ. ವಿವಿಧ ದೇಶಗಳ ಯುವ ಕೌಶಲ್ಯ ಪ್ರತಿಭೆಗಳು ತಮ್ಮ ತಾಂತ್ರಿಕ ಸಾಮರ್ಥ್ಯ, ನಿಖರತೆ, ವೇಗ ಮತ್ತು ಪ್ರಾಯೋಗಿಕ ಜ್ಞಾನವನ್ನು ಪ್ರದರ್ಶಿಸುವ ಈ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಧಾರವಾಡದ ವಿದ್ಯಾರ್ಥಿಗಳಿಗೆ ದೊರೆತಿರುವುದು ಜಿಲ್ಲೆಯ ಪಾಲಿಗೆ ಗಮನಾರ್ಹ ಸಾಧನೆಯಾಗಿದೆ.
ಜಿಲ್ಲಾಧಿಕಾರಿಯಿಂದ ಅಭಿನಂದನೆ : ವಿದ್ಯಾರ್ಥಿಗಳ ಸಾಧನೆಗೆ ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಭಿನಂದನೆ ಸಲ್ಲಿಸಿದ್ದಾರೆ. ಕೌಶಲ್ಯಾಧಾರಿತ ಶಿಕ್ಷಣದ ಮಹತ್ವವನ್ನು ಈ ಸಾಧನೆ ಮತ್ತೊಮ್ಮೆ ತೋರಿಸಿಕೊಟ್ಟಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿಕ್ಷಣದ ಜತೆಗೆ ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಿದಾಗ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು ಎಂಬುದಕ್ಕೆ ಚರಣ್ ಮತ್ತು ಸಿದ್ಧಾರೂಢ್ ಅವರ ಸಾಧನೆ ಉತ್ತಮ ಉದಾಹರಣೆಯಾಗಿದೆ.
ಏಳು ವರ್ಷಗಳಿಂದ ವಿಶೇಷ ತರಬೇತಿ : GTTC ಧಾರವಾಡದ ಪ್ರಾಂಶುಪಾಲ ಶಿವಾನಂದ ಕುಂಬಾರ್ ಮಾತನಾಡಿ, ಸಂಸ್ಥೆಯು 1998ರಿಂದ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯ ತರಬೇತಿ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ ಏಳು ವರ್ಷಗಳಿಂದ WorldSkills ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಸಂಸ್ಥೆಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದೆ. 2021ರಲ್ಲಿಯೂ GTTC ಧಾರವಾಡದ ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಿ ಶ್ರೇಷ್ಠತಾ ಪದಕ ಪಡೆದಿದ್ದರು. ಇದೀಗ ಇಬ್ಬರು ವಿದ್ಯಾರ್ಥಿಗಳು ಮತ್ತೊಮ್ಮೆ ಅಂತರರಾಷ್ಟ್ರೀಯ ವೇದಿಕೆಗೆ ಆಯ್ಕೆಯಾಗಿರುವುದು ಆ ಪರಂಪರೆಯನ್ನು ಮುಂದುವರಿಸಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ತರಬೇತುದಾರರು, ಪೋಷಕರ ಶ್ರಮವೂ ಕಾರಣ : ಚರಣ್ ಮತ್ತು ಸಿದ್ಧಾರೂಢ್ ಅವರ ಈ ಸಾಧನೆಯ ಹಿಂದೆ ಅವರ ವೈಯಕ್ತಿಕ ಪರಿಶ್ರಮದ ಜತೆಗೆ ತರಬೇತುದಾರರ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ ಹಾಗೂ ಸಂಸ್ಥೆಯ ನಿರಂತರ ತರಬೇತಿಯೂ ಪ್ರಮುಖ ಪಾತ್ರ ವಹಿಸಿದೆ.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಎದುರಾಳಿಗಳನ್ನು ಮೀರಿಸಿ ಪ್ರಥಮ ಸ್ಥಾನ ಗಳಿಸಿರುವ ಇಬ್ಬರು ವಿದ್ಯಾರ್ಥಿಗಳು ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಕಾಟ್ರಾನಿಕ್ಸ್ ಮತ್ತು CNC Millingನಂತಹ ಕೈಗಾರಿಕಾ ಕ್ಷೇತ್ರಕ್ಕೆ ನೇರವಾಗಿ ಸಂಬಂಧಿಸಿದ ಕೌಶಲ್ಯ ವಿಭಾಗಗಳಲ್ಲಿ ಅವರು ಭಾರತವನ್ನು ಪ್ರತಿನಿಧಿಸುತ್ತಿರುವುದು ವಿಶೇಷವಾಗಿದೆ.
ಧಾರವಾಡದ GTTC ಕೇಂದ್ರದಿಂದ ಹೊರಹೊಮ್ಮಿದ ಈ ಇಬ್ಬರು ಯುವ ಪ್ರತಿಭೆಗಳು ಶಾಂಘೈನಲ್ಲಿ ನಡೆಯಲಿರುವ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಭಾರತದ ಪರ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಈ ಮೂಲಕ ಧಾರವಾಡದ ಕೌಶಲ್ಯ ಶಿಕ್ಷಣದ ಹೆಗ್ಗಳಿಕೆ ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಳ್ಳುವಂತಾಗಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















