ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಪುರುಷರ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಅವರಿಗೆ ಅವಧಿ ವಿಸ್ತರಣೆ ಸಿಗುವುದು ಬಹುತೇಕ ಅನುಮಾನ ಎನ್ನಲಾಗಿದೆ.
ಬಿಸಿಸಿಐನ ಮುಂಬರುವ ವಾರ್ಷಿಕ ಮಹಾಸಭೆಯಲ್ಲಿ (AGM) ನೂತನ ಚೀಫ್ ಸೆಲೆಕ್ಟರ್ ನೇಮಕವಾಗುವ ಸಾಧ್ಯತೆಯಿದ್ದು, ಈ ಮಹತ್ವದ ಹುದ್ದೆಯ ರೇಸ್‌ನಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಪಾರ್ಥಿವ್ ಪಟೇಲ್ ಮತ್ತು ಪ್ರಗ್ಯಾನ್ ಓಜಾ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮುಂದಿನ ವರ್ಷದ ಏಕದಿನ ವಿಶ್ವಕಪ್‌ವರೆಗೆ ಅಗರ್ಕರ್ ಅವರ ಒಪ್ಪಂದವನ್ನು ಮುಂದುವರಿಸುವ ಕುರಿತು ವದಂತಿಗಳಿದ್ದವು. ಆದರೆ ಬಿಸಿಸಿಐನ ಪ್ರಮುಖ ವಲಯವು ಹೊಸ ಮುಖಕ್ಕೆ ಮಣೆ ಹಾಕಲು ನಿರ್ಧರಿಸಿದೆ. ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ವೈಟ್‌ಬಾಲ್ ಸರಣಿ ಹಾಗೂ ಇರಾನಿ ಟ್ರೋಫಿ ತಂಡಗಳ ಆಯ್ಕೆ ಸಭೆಯೇ ಅಗರ್ಕರ್ ಅಧ್ಯಕ್ಷತೆಯಲ್ಲಿ ನಡೆದ ಕೊನೆಯ ಸಭೆ ಎಂದು ಹೇಳಲಾಗುತ್ತಿದೆ.
ಐಪಿಎಲ್‌ನಲ್ಲಿ ತಲಾ ಮೂರು ಬಾರಿ ಚಾಂಪಿಯನ್ ಆಗಿರುವ ಮಾಜಿ ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ಮತ್ತು ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರ ಪೈಕಿ ಒಬ್ಬರು ಆಯ್ಕೆ ಸಮಿತಿಯ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ.
ಇನ್ನೊಂದೆಡೆ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಅವರನ್ನೂ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ 138 ರನ್‌ಗಳ ಭರ್ಜರಿ ಶತಕ ಸಿಡಿಸುವ ಮೂಲಕ 39ರ ಹರೆಯದ ರೋಹಿತ್ ಆಯ್ಕೆಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದರು.
ರೋಹಿತ್ ಭವಿಷ್ಯದ ಕುರಿತು ಹಬ್ಬಿದ್ದ ಊಹಾಪೋಹಗಳನ್ನು ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ತಳ್ಳಿಹಾಕಿದ್ದು, ರೋಹಿತ್ ಶರ್ಮಾ ಆಯ್ಕೆಗಾರರ ಯೋಜನೆಯಲ್ಲಿರುವವರೆಗೂ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಅಗರ್ಕರ್ ನಿರ್ಗಮನದ ನಂತರ ನೂತನ ಮುಖ್ಯಸ್ಥರಾಗಿ ಯಾರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.





















