SK Home Ad
Home ಸಿನಿ ಮಿಲ್ಸ್ ಅರ್ಜುನ್ ದೇವ್‌ ‘ಟಾಸ್’ ತೆರೆಗೆ: ಕರಾವಳಿ ಭಾಷೆ-ಭಾವನೆಯ ಕಮರ್ಷಿಯಲ್ ಎಂಟರ್‌ಟೈನರ್

ಅರ್ಜುನ್ ದೇವ್‌ ‘ಟಾಸ್’ ತೆರೆಗೆ: ಕರಾವಳಿ ಭಾಷೆ-ಭಾವನೆಯ ಕಮರ್ಷಿಯಲ್ ಎಂಟರ್‌ಟೈನರ್

0
46

ತಾಯಿ–ಮಗನ ಬಾಂಧವ್ಯ, ಕರಾವಳಿಯ ಸೊಗಡು; ‘ಟಾಸ್’ನಲ್ಲಿ ಕಾಮಿಡಿ, ಲವ್ ಮತ್ತು ಆ್ಯಕ್ಷನ್‌ನ ಕಮರ್ಷಿಯಲ್ ಪ್ಯಾಕೇಜ್

ಕರಾವಳಿಯ ಭಾಷೆ, ಸಂಸ್ಕೃತಿ ಹಾಗೂ ಅಲ್ಲಿನ ಕಲಾವಿದರನ್ನು ಪ್ರಮುಖವಾಗಿ ಬಳಸಿಕೊಂಡು ರೂಪುಗೊಂಡಿರುವ ಅರ್ಜುನ್ ದೇವ್ ನಿರ್ದೇಶನದ ‘ಟಾಸ್’ ಸಿನಿಮಾ ಸೆಪ್ಟೆಂಬರ್ 18ರಂದು ಕನ್ನಡ ಹಾಗೂ ತುಳು ಭಾಷೆಗಳಲ್ಲಿ ತೆರೆಗೆ ಬಂದಿದೆ. ನಟನಾಗಿ ಗುರುತಿಸಿಕೊಂಡಿರುವ ಅರ್ಜುನ್ ದೇವ್ ಈ ಚಿತ್ರದ ಮೂಲಕ ನಿರ್ದೇಶನದ ಹೊಣೆಗಾರಿಕೆಯನ್ನೂ ಹೊತ್ತಿದ್ದು, ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಹಿರಿಯ ರಂಗಭೂಮಿ ಕಲಾವಿದ ಹಾಗೂ ನಿರ್ದೇಶಕ ಡಾ. ದೇವದಾಸ್ ಕಾಪಿಕಾಡ್ ನಿರ್ವಹಿಸಿದ್ದಾರೆ.

ಚಿತ್ರದ ಕೇಂದ್ರದಲ್ಲಿರುವ ಶಿವನ ಪಾತ್ರಕ್ಕೆ ತಾಯಿ ಎಂದರೆ ಎಲ್ಲವೂ. ತಾಯಿಗೂ ಮಗನೆಂದರೆ ಅಪಾರ ಅಕ್ಕರೆ. ನಾಯಕ ಯಾವುದೇ ಕೆಲಸ ಮಾಡುವ ಮುನ್ನ ಅಮ್ಮನ ಮಾತಿಗೆ ಮಹತ್ವ ನೀಡಿ, ಟಾಸ್ ಹಾಕಿಯೇ ಮುಂದುವರಿಯುವ ಸ್ವಭಾವದವನಾಗಿ ಕಾಣಿಸಿಕೊಳ್ಳುತ್ತಾನೆ. ಆದರೆ ತಾಯಿಯ ಪ್ರೀತಿಯನ್ನು ಹೆಚ್ಚು ಕಾಲ ಅನುಭವಿಸುವ ಅದೃಷ್ಟ ಶಿವನಿಗೆ ಇರುವುದಿಲ್ಲ. ತಾಯಿ ನಿಧನದ ಬಳಿಕ ತಂದೆಯೇ ಆತನಿಗೆ ಆಧಾರವಾಗುತ್ತಾರೆ.

ಇಡೀ ಕುಟುಂಬವೇ ಕಲಾಸೇವೆಗೆ ತನ್ನನ್ನು ಸಮರ್ಪಿಸಿಕೊಂಡಿರುವ ಹಿನ್ನೆಲೆಯಲ್ಲೇ ಕಥೆ ಸಾಗುತ್ತದೆ. ಕರಾವಳಿ ಭಾಗದ ಸ್ಥಳೀಯ ಭಾಷಾ ಸೊಗಡು, ಅಲ್ಲಿನ ಕಲಾವಿದರು ಮತ್ತು ನೈಸರ್ಗಿಕ ಹಿನ್ನೆಲೆಯನ್ನು ಬಳಸಿಕೊಂಡಿರುವುದು ಚಿತ್ರದ ಪ್ರಮುಖ ಅಂಶವಾಗಿದೆ. ದಕ್ಷಿಣ ಕನ್ನಡದ ವಿವಿಧ ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, ಕರಾವಳಿಯ ವಾತಾವರಣ ಕಥೆಯ ಭಾಗವಾಗಿಯೇ ಮೂಡಿಬಂದಿದೆ.

‘ಟಾಸ್’ನಲ್ಲಿ ಹೀರೋಯಿಸಂ ಮಾತ್ರವಲ್ಲದೆ ಕಾಮಿಡಿ, ಆ್ಯಕ್ಷನ್, ಪ್ರೀತಿ ಮತ್ತು ಕುಟುಂಬದ ಭಾವನೆಗಳಿಗೆ ಜಾಗ ನೀಡಲಾಗಿದೆ. ಕಥೆ ಪರಿಚಿತ ಧಾಟಿಯದ್ದಾಗಿದ್ದರೂ ಚಿತ್ರಕಥೆಯಲ್ಲಿ ಹೊಸತನ ತರಲು ಪ್ರಯತ್ನಿಸಲಾಗಿದೆ. ವಿಶೇಷವಾಗಿ ಹಾಸ್ಯ ಮತ್ತು ನಾಯಕನ ಪಂಚ್ ಡೈಲಾಗ್‌ಗಳು ಹಾಗೂ ಆ್ಯಕ್ಷನ್ ದೃಶ್ಯಗಳು ಚಿತ್ರಕ್ಕೆ ಕಮರ್ಷಿಯಲ್ ಸ್ಪರ್ಶ ನೀಡುವಂತೆ ರೂಪುಗೊಂಡಿವೆ.

ನಾಯಕಿಯಾಗಿ ಸುತೇಜ್ ಶೆಟ್ಟಿ ಕಾಣಿಸಿಕೊಂಡಿದ್ದು, ಅವರನ್ನು ಕೇವಲ ಗ್ಲಾಮರ್ ಪಾತ್ರಕ್ಕೆ ಸೀಮಿತಗೊಳಿಸದೆ ಕಥೆಯಲ್ಲಿ ಮಹತ್ವದ ಜಾಗ ನೀಡಲಾಗಿದೆ. ಕೃತಿ ಶೆಟ್ಟಿ ತಾಯಿಯ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಗರುಡಾ ರಾಮ್, ಬಾಲಾಜಿ ಮನೋಹರ್ ಸೇರಿದಂತೆ ಹಲವು ಕರಾವಳಿ ಕಲಾವಿದರು ಚಿತ್ರಕ್ಕೆ ರಂಗು ತುಂಬಿದ್ದಾರೆ.

ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ಈಗಾಗಲೇ ಬಿಡುಗಡೆಯಾದ ಹಾಡುಗಳು ಗಮನ ಸೆಳೆದಿವೆ. ‘ಹೆಲೋ ಹೆಲೋ ನೀಲಾಂಬರಿ’ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಅರ್ಮಾನ್ ಮಲಿಕ್ ಧ್ವನಿ ನೀಡಿದ್ದಾರೆ. ಚಿತ್ರದ ಮತ್ತೊಂದು ಹಾಡನ್ನೂ ನಾಗಾರ್ಜುನ ಶರ್ಮಾ ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರದ ಟ್ರೇಲರ್‌ನಲ್ಲಿ ತಾಯಿ–ಮಗನ ಭಾವನಾತ್ಮಕ ಸಂಬಂಧದ ಜತೆಗೆ ಪ್ರೀತಿ, ಗ್ಯಾಂಗ್‌ರೈವಲರಿ, ಆ್ಯಕ್ಷನ್ ಮತ್ತು ಹಾಸ್ಯದ ಅಂಶಗಳ ಝಲಕ್ ನೀಡಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ‘ಟಾಸ್’ ಚಿತ್ರವನ್ನು ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ.

ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಪ್ರೇಕ್ಷಕರನ್ನು ತಲುಪುತ್ತಿರುವ ‘ಟಾಸ್’, ಕರಾವಳಿಯ ಸ್ಥಳೀಯ ಸೊಗಡನ್ನು ಕಮರ್ಷಿಯಲ್ ಮನರಂಜನೆಯೊಂದಿಗೆ ಬೆರೆಸುವ ಪ್ರಯತ್ನವಾಗಿ ಗಮನ ಸೆಳೆಯುತ್ತಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.