BBK13: ‘ಬಿಗ್ ಬಾಸ್’ ಕನ್ನಡದ ಮನೆಯೊಳಗೆ ಮೊದಲ ದಿನದಿಂದಲೇ ವಾಗ್ವಾದಗಳು ಶುರುವಾಗಿದ್ದು, ಇದೀಗ ‘ಅಗ್ನಿಪರೀಕ್ಷೆ’ಯಿಂದ ಆಯ್ಕೆಯಾಗಿ ಬಂದ ಕಿರಣ್ ಶಾಸ್ತ್ರಿ ಹಾಗೂ ಸೆಲೆಬ್ರಿಟಿ ತಾಂಡವ್ ರಾಮ್ ನಡುವಿನ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪೈಲೆಟ್ ಆಯ್ಕೆಗಾಗಿ ನಡೆದ ಟಾಸ್ಕ್‌ನಲ್ಲಿ ಪಂಚೆಯಲ್ಲಿ ವಸ್ತುಗಳನ್ನು ತಂದಿದ್ದಕ್ಕೆ ಕಿರಣ್ ಶಾಸ್ತ್ರಿ ಆಟದಿಂದ ಹೊರಗಿಟ್ಟು, ಸಂಗೀತಾ ಭಟ್‌ಗೆ ಪೈಲಟ್ ಪಟ್ಟ ನೀಡಲಾಗಿತ್ತು. ಇದರಿಂದ ರೊಚ್ಚಿಗೆದ್ದ ಕಿರಣ್ ಶಾಸ್ತ್ರಿ, ತಮಗೆ ಅನ್ಯಾಯವಾಗಿದೆ ಎಂದು ಆಯೋಜಕರು ಹಾಗೂ ಸಹ-ಸ್ಪರ್ಧಿಗಳ ವಿರುದ್ಧ ಕಿಡಿಕಾರಿದ್ದಾರೆ.
ಟಾಸ್ಕ್ ನಿಯಮಗಳ ವಿಚಾರವಾಗಿ ವಾದಕ್ಕಿಳಿದ ಕಿರಣ್, ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಅವರನ್ನು “ದಂಡಪಿಂಡಗಳು” ಹಾಗೂ “ಬಳೆ ಹಾಕಿಕೊಳ್ಳಿ” ಎಂದು ತುಚ್ಛವಾಗಿ ನಿಂದಿಸಿದರು. ಈ ‘ಬಳೆ’ ಹೇಳಿಕೆಗೆ ವೈಷ್ಣವಿ, ಮಂಜು ಮತ್ತು ಸಂಗೀತಾ ಸೇರಿದಂತೆ ಮನೆಯ ಇತರ ಸ್ಪರ್ಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆ ನಂತರ, ತಮಗೆ ದೇವಿಯ ಪ್ರಸಾದ ಸಿಕ್ಕಿದೆ ಎಂದು ಹೇಳುತ್ತಾ ದೇವಿ ವಿಗ್ರಹಕ್ಕೆ ನಮಸ್ಕರಿಸಿದ ಕಿರಣ್, ಮನೆಯವರ ವಿರುದ್ಧ ತಮ್ಮ ಆಕ್ರೋಶವನ್ನು ಮುಂದುವರಿಸಿದರು.
ನಾಮಿನೇಶನ್ ಪ್ರಕ್ರಿಯೆಯ ವೇಳೆ ಕಿರಣ್ ಮತ್ತು ತಾಂಡವ್ ನಡುವಿನ ಜಟಾಪಟಿ ಮತ್ತಷ್ಟು ಹೆಚ್ಚಾಯಿತು. ತಾಂಡವ್ ರಾಮ್ ಅವರನ್ನು ನಾಮಿನೇಟ್ ಮಾಡಿದ ಕಿರಣ್ ಶಾಸ್ತ್ರಿ, ಅವರನ್ನು “ಬ್ರೇನ್-ಲೆಸ್” ಹಾಗೂ “ಸಂಚು ಮಾಡುವ ನರಿ” ಎಂದು ಹೀಯಾಳಿಸಿದರು. ವೈಷ್ಣವಿ ಕೂಡ ಕಿರಣ್ ಅವರನ್ನು ನಾಮಿನೇಟ್ ಮಾಡಿ, ಸೋಲು-ಗೆಲುವನ್ನು ಒಪ್ಪಿಕೊಳ್ಳದ ಅವರ ಮನಸ್ಥಿತಿಯನ್ನು ಪ್ರಶ್ನಿಸಿದರು. ಕಿರಣ್ ಅವರ ಸರಣಿ ನಿಂದನೆಗಳಿಂದ ಕೆರಳಿದ ತಾಂಡವ್ ರಾಮ್, “ಟಾಸ್ಕ್ ಮುಗಿದ ಮೇಲೆಯೂ ಮಾತನಾಡಿದರೆ ಎದೆ ಮೇಲೆ ಕಾಲಿಟ್ಟು ಪಚಡಿ ಮಾಡುತ್ತೇನೆ” ಎಂದು ನೇರವಾಗಿ ವಾರ್ನಿಂಗ್ ನೀಡಿದರು. ಅಲ್ಲದೆ.. ಹೆಸರು ಹಿಡಿದು ಚೀಪ್ ಆಗಿ ಮಾತನಾಡದಂತೆ ತಾಂಡವ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.






















