SK Home Ad
Home ಕ್ರೀಡೆ RCB ಹರಾಜಿನ ಅಸಲಿ ಕಥೆ ಬಿಚ್ಚಿಟ್ಟ ಭುವನೇಶ್ವರ್ ಕುಮಾರ್

RCB ಹರಾಜಿನ ಅಸಲಿ ಕಥೆ ಬಿಚ್ಚಿಟ್ಟ ಭುವನೇಶ್ವರ್ ಕುಮಾರ್

0
28

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಬರೋಬ್ಬರಿ 10.75 ಕೋಟಿ ರೂ. ನೀಡಿ ತನ್ನನ್ನು ಖರೀದಿಸಿದಾಗ ತಮಗೆ ತೀವ್ರ ಅಚ್ಚರಿಯಾಗಿತ್ತು ಎಂದು ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಬಹಿರಂಗಪಡಿಸಿದ್ದಾರೆ. ಖ್ಯಾತ ಕ್ರೀಡಾ ನಿರೂಪಕ ಜತಿನ್ ಸಪ್ರು ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಹರಾಜಿನ ದಿನ ಮೈದಾನದಲ್ಲಿ ನಡೆದ ಕುತೂಹಲಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ.

ಮೆಗಾ ಹರಾಜಿನ ಎರಡನೇ ದಿನ ತಮ್ಮ ಹೆಸರು ಬಿಡ್ಡಿಂಗ್‌ಗೆ ಬಂದಾಗ, ಭುವನೇಶ್ವರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವನ್ನು ಮುನ್ನಡೆಸುತ್ತಿದ್ದರು. ‘ನಾವು ಮೈದಾನಕ್ಕೆ ಕಾಲಿಡುತ್ತಿದ್ದ ವೇಳೆ ತಂಡದ ವಿಡಿಯೋ ವಿಶ್ಲೇಷಕರು ಹರಾಜು ವೀಕ್ಷಿಸುತ್ತಿದ್ದರು. ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ನನಗಾಗಿ ಪೈಪೋಟಿ ನಡೆಸುತ್ತಿದ್ದವು. ಬಿಡ್ಡಿಂಗ್ 5 ರಿಂದ 6 ಕೋಟಿ ರೂ. ತಲುಪಿದಾಗ ಅಂಪೈರ್‌ಗಳು ಮೈದಾನ ಪ್ರವೇಶಿಸಿದ್ದರಿಂದ ನಾನು ಪಂದ್ಯವಾಡಲು ತೆರಳಬೇಕಾಯಿತು. ಪಂದ್ಯದ ಕೆಲವು ಓವರ್‌ಗಳ ಬಳಿಕ ಯಾರೋ ಬಂದು ಆರ್‌ಸಿಬಿ ನನ್ನನ್ನು 10.75 ಕೋಟಿಗೆ ಖರೀದಿಸಿದೆ ಎಂದರು. ಆರಂಭದಲ್ಲಿ ಬೇರೆ ತಂಡಗಳು ಬಿಡ್ ಮಾಡುತ್ತಿದ್ದ ಕಾರಣ ಆರ್‌ಸಿಬಿ ಖರೀದಿಸಿದ್ದು ನನಗೆ ಅಚ್ಚರಿ ತಂದಿತು’ ಎಂದು ಭುವಿ ಹೇಳಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಕ್ಕೂ ನನ್ನನ್ನು ತೆಗೆದುಕೊಳ್ಳುವ ಆಸೆಯಿತ್ತು, ಆದರೆ ಬಜೆಟ್ ಸಮಸ್ಯೆಯಿಂದ ಸಾಧ್ಯವಾಗಲಿಲ್ಲ ಎಂದು ಕೋಚ್ ಡೇನಿಯಲ್ ವೆಟ್ಟೋರಿ ಮೊದಲೇ ತಿಳಿಸಿದ್ದರು ಎಂದಿದ್ದಾರೆ. ಇನ್ನು ಬೃಹತ್ ಅಭಿಮಾನಿ ಬಳಗ ಹೊಂದಿರುವ ಆರ್‌ಸಿಬಿ ಸೇರಿದಾಗ ಯಾವುದೇ ಕಪ್ ಗೆಲ್ಲುವ ಅನಗತ್ಯ ಒತ್ತಡವಿರಲಿಲ್ಲ ಎಂದು ತಿಳಿಸಿದ್ದಾರೆ.

ತಮ್ಮ ಅನುಭವದ ಬಲದಿಂದ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಭುವನೇಶ್ವರ್ ಕುಮಾರ್, 2026ರ ಐಪಿಎಲ್‌ನಲ್ಲಿ 28 ವಿಕೆಟ್ ಕಬಳಿಸಿ ಆರ್‌ಸಿಬಿ ಬ್ಯಾಕ್-ಟು-ಬ್ಯಾಕ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಎರಡು ಋತುಗಳಲ್ಲಿ ಆರ್‌ಸಿಬಿ ಪರ 30 ಪಂದ್ಯಗಳಿಂದ ಒಟ್ಟು 45 ವಿಕೆಟ್ ಕಬಳಿಸಿ ತಂಡದ ಯಶಸ್ವಿ ಬೌಲರ್ ಆಗಿ ಮಿಂಚಿದ್ದಾರೆ.