SK Home Ad
Home ನಮ್ಮ ಜಿಲ್ಲೆ ಹಾವೇರಿ 60 ತಿಂಗಳಲ್ಲಿ ಒಂದು ತಿಂಗಳು ರಾಜಕೀಯ, 59 ತಿಂಗಳು ಅಭಿವೃದ್ಧಿ

60 ತಿಂಗಳಲ್ಲಿ ಒಂದು ತಿಂಗಳು ರಾಜಕೀಯ, 59 ತಿಂಗಳು ಅಭಿವೃದ್ಧಿ

0
59

ಹಾವೇರಿ: ರಾಜಕೀಯ ಹಾಗೂ ಚುನಾವಣೆಯು 60 ತಿಂಗಳಲ್ಲಿ ಒಂದು ತಿಂಗಳು ಮಾತ್ರ ಇರಬೇಕು, ಉಳಿದ 59 ತಿಂಗಳು ಜನಪರ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಾರನಬೀಡ ಗ್ರಾಮದಲ್ಲಿ ನೂತನ ಆಯುಷ್ಮಾನ ಆರೋಗ್ಯ ಕೇಂದ್ರ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಮಾರಣಬೀಡು ಗ್ರಾಮದಲ್ಲಿ ಈ ಆರೋಗ್ಯ ಕೇಂದ್ರ ಆರಂಭವಾಗಿರುವುದು ಅತ್ಯಂತ ಸಂತೋಷದ ವಿಷಯವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಇದು ತುಂಬಾ ಉಪಯುಕ್ತವಾಗಲಿದೆ. ​ಈ ಆರೋಗ್ಯ ಕೇಂದ್ರದಲ್ಲಿಯೇ ಆರೋಗ್ಯ ಅಧಿಕಾರಿಗೆ ವಾಸಿಸಲು ಮೇಲಿನ ಅಂತಸ್ತಿನಲ್ಲಿ ಮನೆಯ ವ್ಯವಸ್ಥೆ ಮಾಡಲಾಗಿದೆ.
​ಕೆಳಗಿನ ಭಾಗದಲ್ಲಿ ಆಸ್ಪತ್ರೆ ಹಾಗೂ ಪರೀಕ್ಷೆಗಾಗಿ ಲ್ಯಾಬ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ​ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಮತ್ತು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

​​ಧೂಮಪಾನ ತ್ಯಜಿಸಿ: ತಂಬಾಕು ಹಾಗೂ ಸಿಗರೇಟ್ ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಹೀಗಾಗಿ ಪ್ರತಿಯೊಬ್ಬರೂ ಧೂಮಪಾನವನ್ನು ಸಂಪೂರ್ಣವಾಗಿ ಬಿಡಬೇಕು. ದೇಶದಲ್ಲಿ ಶೇಕಡಾ 11ರಷ್ಟು ಜನಸಂಖ್ಯೆ ಅಂದರೆ ಸುಮಾರು 14 ರಿಂದ 14.5 ಕೋಟಿ ಜನರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

​ಆಯುಷ್ಮಾನ್ ಭಾರತ್ ಯೋಜನೆ: ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ‘ಆಯುಷ್ಮಾನ್ ಭಾರತ್’ ಯೋಜನೆಯಡಿ ಬಡವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿವರೆಗೆ ನೆರವು ನೀಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 2 ಕೋಟಿ ಆಯುಷ್ಮಾನ್ ಕಾರ್ಡ್‌ಗಳಿದ್ದು, ಈಗಾಗಲೇ 90 ಲಕ್ಷಕ್ಕೂ ಅಧಿಕ ಜನರು ಇದರ ಸೌಲಭ್ಯ ಪಡೆದುಕೊಂಡಿದ್ದಾರೆ. ಉಳಿದ ಹಣವನ್ನು ಇಂತಹ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂದು ತಿಳಿಸಿದರು.

​​ಆರೋಗ್ಯ ಕೇಂದ್ರಗಳ ನಿರ್ಮಾಣ: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಮತ್ತು ಇಡೀ ಜಿಲ್ಲೆಯಲ್ಲಿ ಉಳಿತಾಯವಾಗಿರುವ ಅನುದಾನವನ್ನು ಬಳಸಿ, ಪ್ರತಿಯೊಂದು ತಾಲೂಕಿಗೆ 7 ರಿಂದ 8ರಂತೆ ನೂತನ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಈ ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಒಬ್ಬ ವೈದ್ಯರು, ಒಬ್ಬ ಆರೋಗ್ಯ ಅಧಿಕಾರಿ, ಪರೀಕ್ಷೆಗಳನ್ನು ನಡೆಸಲು ಪ್ರಯೋಗಾಲಯ ಸಿಬ್ಬಂದಿ ಹಾಗೂ ಇಬ್ಬರು ನರ್ಸ್‌ಗಳ ವ್ಯವಸ್ಥೆ ಇರುವುದು ಅತ್ಯಗತ್ಯ ಎಂದು ಅವರು ತಿಳಿಸಿದರು.

ಕನಿಷ್ಠ ತಾಲೂಕಿನಲ್ಲಿ ಖಾಸಗಿ ವೈದ್ಯರ ಮೂಲಕ ಸೇವೆ ಪಡೆಯುವುದು ಹಾಗೂ ಲ್ಯಾಬ್ ಅಸಿಸ್ಟೆಂಟ್ ವ್ಯವಸ್ಥೆಯನ್ನು ಕುಳಿತುಕೊಂಡು ಚಿಂತನೆ ನಡೆಸಿ ಯಶಸ್ವಿಗೊಳಿಸಬೇಕಾದ ಅವಶ್ಯಕತೆಯಿದೆ ಎಂದರು.

​ಅಭಿವೃದ್ಧಿ ಕಾರ್ಯಗಳು: ಯಾವುದೇ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯಬೇಕು ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮ್ಯಾಚಿಂಗ್ ಗ್ರಾಂಟ್ ಹಾಗೂ ಯುಟಿಲೈಸೇಷನ್ ಸರ್ಟಿಫಿಕೇಟ್ ಪಡೆದು ರಾಜ್ಯದ ಜನತೆಗೆ ಗರಿಷ್ಠ ಲಾಭ ತಂದುಕೊಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಮಠದ ಊಟದ ಮನೆ ವ್ಯವಸ್ಥೆಗಾಗಿ ಈಗಾಗಲೇ 10 ಲಕ್ಷ ರೂಪಾಯಿಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇನ್ನೂ 20 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.