SK Home Ad
Home ನಮ್ಮ ಜಿಲ್ಲೆ ಚಾಮರಾಜನಗರ ಕಾಡಾನೆ-ಹುಲಿ ಅಟ್ಟಹಾಸ: ಒಂದೇ ದಿನ ಇಬ್ಬರು ರೈತರು ಸಾವು

ಕಾಡಾನೆ-ಹುಲಿ ಅಟ್ಟಹಾಸ: ಒಂದೇ ದಿನ ಇಬ್ಬರು ರೈತರು ಸಾವು

0
42

ಚಾಮರಾಜನಗರ: ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಇಬ್ಬರು ರೈತರು ಸಾವನ್ನಪ್ಪಿರುವ ಪ್ರತ್ಯೇಕ ಘಟನೆಗಳು ನಡೆದಿವೆ.

ಗೌರಿ-ಗಣೇಶದ ಹಬ್ಬದ ಸಂಭ್ರಮವನ್ನು ಗಡಿ ಜಿಲ್ಲೆಯಲ್ಲಿ ವನ್ಯಜೀವಿಗಳು ಕಸಿದುಕೊಂಡಿದ್ದು, ಸೋಮವಾರ ಬೆಳಗ್ಗೆ ಕಾಡಾನೆ ದಾಳಿಗೆ ರೈತನೊಬ್ಬ ಮೃತಪಟ್ಟರೇ, ಸಂಜೆ ಹುಲಿ ದಾಳಿಗೆ ಮತ್ತೊಬ್ಬ ರೈತ ಸಾವನ್ನಪ್ಪಿದ್ದಾನೆ.

ಕಾಡಾನೆ ದಾಳಿ: ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದ ನಿವಾಸಿ ಜನ್ನೂರ ನಾಯಕ (68) ಈತ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಹಸುಗಳನ್ನು ಕಟ್ಟುತ್ತಿದ್ದಾಗ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿದೆ. ಪರಿಣಾಮ ಜನ್ನೂರ ನಾಯಕ ತ್ರೀವ ಗಾಯಗೊಂಡು ಅಸ್ವಸ್ಥಗೊಂಡಿದ್ದಾರೆ.

ಕೂಡಲೇ ಅಕ್ಕಪಕ್ಕದ ಜಮೀನವರು ಜನ್ನೂರು ನಾಯಕನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಹುಲಿ ದಾಳಿ: ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದ ನಿವಾಸಿ ಬಸವಣ್ಣ (65) ಈತ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಹಸುಗಳಿಗೆ ಹುಲ್ಲು ಕೊಯ್ಯಲೆಂದು ತೆರಳಿದಾಗ ಏಕಾಏಕಿ ಹುಲಿ ದಾಳಿ ನಡೆಸಿ, ಆತನನ್ನು ಕಬ್ಬಿನ ಗದ್ದೆಯೊಳಗೆ ಎಳೆದುಕೊಂಡು ಹೋಗಿ, ದೇಹದ ಅರ್ಧ ಭಾಗವನ್ನು ತಿಂದಿದೆ.

ಬಸವಣ್ಣ ಸೋಮವಾರ ಮಧ್ಯಾಹ್ನ ಜಮೀನಿಗೆ ಹುಲ್ಲು ಕೊಯ್ಯಲೆಂದು ತೆರಳಿ ಸಂಜೆಯಾದರೂ ಹಿಂತಿರುಗದಿದ್ದರಿಂದ ಸಂಬಂಧಿಕರು ಜಮೀನಿಗೆ ತೆರಳಿದಾಗ ಹುಲಿ ದಾಳಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಬಸವಣ್ಣನ ದೇಹದ ನಾನಾಕಡೆ ಮಾಂಸವನ್ನು ಹುಲಿ ತಿಂದು ಹಾಕಿದ್ದು ಸಮೀಪದ ಜಮೀನಿನಲ್ಲೇ ಬೀಡುಬಿಟ್ಟಿದೆ.

ರೈತರ ಕುಟುಂಬಕ್ಕೆ ಪರಿಹಾರ ವಿತರಣೆ: ಗಣೇಶ ಹಬ್ಬದ ದಿನದಂದೇ ಕಾಡಾನೆ ಹಾಗೂ ಹುಲಿ ದಾಳಿಯಿಂದ ಮೃತಪಟ್ಟ ಇಬ್ಬರು ರೈತರ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ಪ್ರತ್ಯೇಕವಾಗಿ 5 ಲಕ್ಷ ಪರಿಹಾರ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಹಾರ ನೀಡುವುದಾಗಿ ಭರವಸೆ ನೀಡಿದೆ.

ಕಾಡಾನೆ-ಹುಲಿ ಸೆರೆಗಾಗಿ ಕಾರ್ಯಾಚರಣೆ: ಕೋಟೆಕೆರೆ ಗ್ರಾಮದಲ್ಲಿ ರೈತನ ಮೇಲೆ ದಾಳಿ ನಡೆಸಿದ ಕಾಡಾನೆಯನ್ನು ಸೆರೆ ಹಿಡಿಯಲು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವನ್ಯಜೀವಿ ವಲಯ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಮತ್ತೊಂದೆಡೆ ಬಡಗಲಪುರ ಗ್ರಾಮದಲ್ಲಿ ನರಭಕ್ಷ ಹುಲಿ ಸೆರೆಗಾಗಿ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನಾ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಹುಲಿ ಸೆರೆಗಾಗಿ ಕಬ್ಬಿನ ಗದ್ದೆಯಲ್ಲಿ ಕೊಟ್ಟಿಗೆ ಮಾದರಿ ಬೋನ್ ಅಳವಡಿಸಿದ್ದಾರೆ. ಅಲ್ಲದೆ ಹುಲಿಯ ಚಲನವಲನಗಳನ್ನ ಗಮನಿಸಲು ಡ್ರೋನ್ ಕ್ಯಾಮರಾ ಬಳಕೆ ಮಾಡುವ ಮೂಲಕ ಹುಲಿ ಸೆರೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ.