ಹುಬ್ಬಳ್ಳಿ: ದೇಶದ ಆರ್ಥಿಕತೆ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗೆ ಬಂಡವಾಳ ವೆಚ್ಚ, ವಿದ್ಯುತ್ ಉತ್ಪಾದನೆ ಹಾಗೂ ಬಳಕೆಯಲ್ಲಿನ ಏರಿಕೆ ಸಾಕ್ಷಿಯಾಗಿದೆ. ಚೀನಾ ಸೇರಿದಂತೆ ವಿದೇಶಿ ಅವಲಂಬನೆ ಕಡಿಮೆ ಮಾಡಿ ದೇಶಿಯ ಉತ್ಪಾದನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗತಿಶಕ್ತಿ ಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಬಂಡವಾಳ ವೆಚ್ಚ ಕಡಿಮೆಯಾದರೆ ಅದನ್ನು ಪ್ರಶ್ನಿಸುವ ಮಟ್ಟಿಗೆ ಮೇಲ್ವಿಚಾರಣೆ ನಡೆಯುತ್ತಿದೆ. ಇದರಿಂದ ಮೂಲಸೌಕರ್ಯ ನಿರ್ಮಾಣಕ್ಕೆ ಸರ್ಕಾರ ನೀಡುತ್ತಿರುವ ಆದ್ಯತೆ ಸ್ಪಷ್ಟವಾಗುತ್ತದೆ ಎಂದರು.
2014ರಲ್ಲಿ ದೇಶದ ಸೌರ ಮಾದರಿ (ಸೋಲಾರ್ ಮಾಡ್ಯೂಲ್) ಉತ್ಪಾದನಾ ಸಾಮರ್ಥ್ಯ ಕೇವಲ 2.66 ಗಿಗಾವ್ಯಾಟ್ ಇತ್ತು. ಈಗ ಅದು ಸುಮಾರು 170 ಗಿಗಾವ್ಯಾಟ್‌ಗೆ ತಲುಪಿದೆ. ಹಿಂದೆ ಸೌರ ಉಪಕರಣಗಳಿಗಾಗಿ ಬಹುತೇಕ ಸಂಪೂರ್ಣವಾಗಿ ವಿದೇಶವನ್ನು ಅವಲಂಬಿಸಿದ್ದ ಭಾರತ, ಈಗ ಉತ್ಪಾದನೆ ಮಾಡುವುದರ ಜತೆಗೆ ರಫ್ತು ಮಾಡುವ ಹಂತಕ್ಕೆ ಬಂದಿದೆ. ಸೌರ ಸೆಲ್‌ಗಳ ಉತ್ಪಾದನೆಯೂ ದೇಶದಲ್ಲೇ ನಡೆಯುತ್ತಿದೆ ಎಂದು ಹೇಳಿದರು.
ಮೊಬೈಲ್ ಉತ್ಪಾದನೆಯಲ್ಲೂ ಭಾರತ ಮಹತ್ವದ ಪ್ರಗತಿ ಸಾಧಿಸಿದೆ. ದೇಶದಲ್ಲಿ ಬಳಕೆಯಾಗುತ್ತಿರುವ ಶೇ. 98ರಷ್ಟು ಮೊಬೈಲ್‌ಗಳು ಭಾರತದಲ್ಲೇ ತಯಾರಾಗುತ್ತಿವೆ. ಮುಂದಿನ ಹಂತದಲ್ಲಿ ಭಾರತೀಯ ವಿನ್ಯಾಸ ಮತ್ತು ಭಾರತೀಯ ಉತ್ಪಾದನೆಯ ಮೊಬೈಲ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಬರಲಿವೆ ಎಂದರು.





















