SK Home Ad
Home ಸುದ್ದಿ ದೇಶ ಜಾಗತಿಕ ಸಂಘರ್ಷದ ನಡುವೆ ಬ್ರಿಕ್ಸ್‌ಗೆ ಮೋದಿ ಎಚ್ಚರಿಕೆ; ಒಗ್ಗಟ್ಟಿಗೆ ಕರೆ

ಜಾಗತಿಕ ಸಂಘರ್ಷದ ನಡುವೆ ಬ್ರಿಕ್ಸ್‌ಗೆ ಮೋದಿ ಎಚ್ಚರಿಕೆ; ಒಗ್ಗಟ್ಟಿಗೆ ಕರೆ

0
2

ನವದೆಹಲಿ: ಜಗತ್ತಿನಾದ್ಯಂತ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳು ಸಾಮಾನ್ಯ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಇಂತಹ ಸಂಕಷ್ಟಗಳನ್ನು ಎದುರಿಸಲು ಬ್ರಿಕ್ಸ್ ರಾಷ್ಟ್ರಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಮತ್ತು ನಿರ್ಣಾಯಕ ಖನಿಜ ಸಂಪನ್ಮೂಲಗಳನ್ನು ಅಸ್ತ್ರವಾಗಿ ಬಳಸುವ ಪ್ರವೃತ್ತಿ ಜಾಗತಿಕ ಆರ್ಥಿಕತೆ ಹಾಗೂ ಅಭಿವೃದ್ಧಿಗೆ ಗಂಭೀರ ಸವಾಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ತಂತ್ರಜ್ಞಾನ, ಖನಿಜಗಳು ಹಾಗೂ ಪೂರೈಕೆ ಸರಪಳಿಗಳ ಮೇಲಿನ ಅವಲಂಬನೆಯನ್ನು ರಾಜಕೀಯ ಒತ್ತಡಕ್ಕೆ ಬಳಸುವುದರಿಂದ ಜಾಗತಿಕ ಪ್ರಗತಿ ಮತ್ತು ಸಮೃದ್ಧಿಗೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್‌ ಕಾರ್ಯಸೂಚಿಯಲ್ಲಿ ಸ್ಥಿತಿಸ್ಥಾಪಕತೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ ಎಂಬ ನಾಲ್ಕು ಪ್ರಮುಖ ಅಂಶಗಳಿಗೆ ಒತ್ತು ನೀಡಲಾಗಿದೆ. ಸದಸ್ಯ ರಾಷ್ಟ್ರಗಳ ಸಹಕಾರದಿಂದ ಈ ಗುರಿಗಳನ್ನು ಸಾಕಾರಗೊಳಿಸಲು ಸಾಧ್ಯವಾಗಿದೆ ಎಂದು ಮೋದಿ ಹೇಳಿದರು.

ಯಾವುದೇ ಬಿಕ್ಕಟ್ಟು ಒಂದೇ ಪ್ರದೇಶಕ್ಕೆ ಸೀಮಿತವಲ್ಲ: ಕೊರೊನಾ ಸಾಂಕ್ರಾಮಿಕ, ಹವಾಮಾನ ವೈಪರೀತ್ಯಗಳು ಹಾಗೂ ಜಾಗತಿಕ ಪೂರೈಕೆ ಸರಪಳಿಯಲ್ಲಿನ ವ್ಯತ್ಯಯಗಳು, ಇಂದಿನ ಪರಸ್ಪರ ಅವಲಂಬಿತ ಜಗತ್ತಿನಲ್ಲಿ ಯಾವುದೇ ಬಿಕ್ಕಟ್ಟು ಒಂದೇ ದೇಶ ಅಥವಾ ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ ಎಂದು ಪ್ರಧಾನಿ ಹೇಳಿದರು.

ಆದ್ದರಿಂದ, ಬಿಕ್ಕಟ್ಟು ಎದುರಾದ ಬಳಿಕ ಪ್ರತಿಕ್ರಿಯಿಸುವುದಕ್ಕಿಂತ ಅಪಾಯಗಳನ್ನು ಮೊದಲೇ ಗುರುತಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ತ್ವರಿತವಾಗಿ ಸ್ಪಂದಿಸುವ ವ್ಯವಸ್ಥೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಸಾಂಕ್ರಾಮಿಕ ರೋಗಗಳ ವಿರುದ್ಧ ಸಮಗ್ರ ವ್ಯವಸ್ಥೆ: ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ಅವುಗಳ ಪರಿಣಾಮಕಾರಿ ನಿರ್ವಹಣೆಗಾಗಿ ಬ್ರಿಕ್ಸ್ ರಾಷ್ಟ್ರಗಳು ಸಮಗ್ರ ಮುನ್ನೆಚ್ಚರಿಕೆ ವ್ಯವಸ್ಥೆ ರೂಪಿಸುವ ಕುರಿತು ಒಮ್ಮತಕ್ಕೆ ಬಂದಿವೆ. ರೋಗಗಳ ಕುರಿತ ಮುನ್ನೆಚ್ಚರಿಕೆ ಮಾಹಿತಿಯನ್ನು ವಿವಿಧ ರಾಷ್ಟ್ರಗಳ ನಡುವೆ ಸಮನ್ವಯಗೊಳಿಸುವ ವ್ಯವಸ್ಥೆಗಾಗಿ ಮಾರ್ಗಸೂಚಿಗಳನ್ನೂ ರೂಪಿಸಲಾಗಿದೆ ಎಂದು ಮೋದಿ ತಿಳಿಸಿದರು.

ಇಂತಹ ವ್ಯವಸ್ಥೆಯು ಭವಿಷ್ಯದಲ್ಲಿ ಹೊಸ ಸಾಂಕ್ರಾಮಿಕ ರೋಗಗಳ ಅಪಾಯವನ್ನು ಮುಂಚಿತವಾಗಿ ಗುರುತಿಸಲು, ಮಾಹಿತಿಯನ್ನು ಹಂಚಿಕೊಳ್ಳಲು ಹಾಗೂ ಅಗತ್ಯವಿರುವ ಸಂದರ್ಭಗಳಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಲು ನೆರವಾಗಲಿದೆ ಎಂದರು.

ಜಾಗತಿಕ ಸಹಕಾರಕ್ಕೆ ಮೋದಿ ಒತ್ತು: ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಹವಾಮಾನ ಬದಲಾವಣೆ, ಆರೋಗ್ಯ ಬಿಕ್ಕಟ್ಟುಗಳು, ಪೂರೈಕೆ ಸರಪಳಿ ವ್ಯತ್ಯಯಗಳು ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿನ ವೇಗದ ಬದಲಾವಣೆಗಳ ಹಿನ್ನೆಲೆಯಲ್ಲಿ ದೇಶಗಳ ನಡುವಿನ ಸಹಕಾರ ಮತ್ತಷ್ಟು ಬಲಗೊಳ್ಳಬೇಕಿದೆ ಎಂದು ಮೋದಿ ಹೇಳಿದರು.

ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಚಿಯಾನ್, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಹಾಗೂ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸೇರಿದಂತೆ ಬ್ರಿಕ್ಸ್‌ನ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯನ್ನು ಬಲಪಡಿಸುವುದು ಹಾಗೂ ಪರಸ್ಪರ ಸಹಕಾರದ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುವುದು ಬ್ರಿಕ್ಸ್‌ನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನಿಂದ ಮುಂದುವರಿಯಬೇಕಿದೆ ಎಂಬ ಸಂದೇಶವನ್ನು ಮೋದಿ ಶೃಂಗಸಭೆಯಲ್ಲಿ ನೀಡಿದ್ದಾರೆ.