ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಯಲ್ಲಿ ಬೃಹತ್ ನಕಲಿ ಔಷಧ ಜಾಲ ಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ.
ನಕಲಿ ಜಾಲಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 6 ರಾಜ್ಯಗಳ ಸುಮಾರು 10ಕ್ಕೂ ಅಧಿಕ ಸ್ಥಳಗಳಲ್ಲಿ ಏಕಕಾಲಕ್ಕೆ ಜಂಟಿ ದಾಳಿ ನಡೆಸಿ, ಶೋಧ ನಡೆಸುತ್ತಿದ್ದಾರೆ. ಬೆಂಗಳೂರು, ಹರಿಯಾಣ, ಹಿಮಾಚಲ ಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ವಿಸ್ತರಿಸಿದ್ದ ಈ ನಕಲಿ ಜಾಲದ ಪ್ರಮುಖ ಫಾರ್ಮ್ಹೌಸ್‌ಗಳು, ತಯಾರಿಕಾ ಘಟಕಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ಖಚಿತಪಡಿಸಿವೆ.
ಈ ಬೃಹತ್ ನಕಲಿ ಜಾಲದ ಪ್ರಮುಖ ಆರೋಪಿ ಎನ್ನಲಾದ ಆರ್. ಪ್ರಶಾಂತ್ ಹಾಗೂ ಆತನ ಗ್ಯಾಂಗ್‌ನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ವೀರೇಶ್ ಕುಮಾರ್ ಎಂಬಾತನ ಮನೆ, ಕಚೇರಿ, ಮಿನರ್ವ ಸರ್ಕಲ್ ಬಳಿ ಆತ ಹೊಂದಿದ್ದ ಕೃಪಾ ಹೆಲ್ತ್ ಕೇರ್ ಮೇಲೆ ಎಸ್‌ಐಟಿ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿದೆ. ಕಳೆದ ಒಂದು ವರ್ಷದಿಂದ ವೀರೇಶ್ ಹಾಗೂ ಪ್ರಶಾಂತ್ ಉದ್ಯಮದ ಪಾಲುದಾರಿಕೆ ಹೊಂದಿದ್ದು, ತನಿಖೆಯಲ್ಲಿ ತಿಳಿದುಬಂದಿದೆ.
ತಯಾರಾಗುತ್ತಿದ್ದ ನಕಲಿ ಔಷಧಿಗಳನ್ನ ಮಿನರ್ವ ಸರ್ಕಲ್‌ನಲ್ಲಿರುವ ಗೋಡೌನ್‌ಗೆ ತಂದು ನಂತರ ನಗರದ ಮೆಡಿಕಲ್ ಸ್ಟೋರ್‌ಗಳಿಗೆ ಹಾಗೂ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ.
ಸದ್ಯ ವೀರೇಶ್ ಕುಮಾರ್ ಮನೆ ಹಾಗೂ ಕೃಪಾ ಹೆಲ್ತ್ ಕೇರ್ ಸಂಸ್ಥೆಯಿಂದ ನಕಲಿ ಔಷಧಗಳು, ನಕಲಿ ಬಿಲ್ಸ್ ಹಾಗೂ ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.



















