SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ‘ಬಳ್ಳಾರಿ ಚಲೋ’ ಸಮಾರೋಪಕ್ಕೂ ಮುನ್ನ ವಿವಿಧ ಸಮುದಾಯಗಳ ಮಹನೀಯರಿಗೆ ವಿಜಯೇಂದ್ರ ಗೌರವ

‘ಬಳ್ಳಾರಿ ಚಲೋ’ ಸಮಾರೋಪಕ್ಕೂ ಮುನ್ನ ವಿವಿಧ ಸಮುದಾಯಗಳ ಮಹನೀಯರಿಗೆ ವಿಜಯೇಂದ್ರ ಗೌರವ

0
63

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ 10 ದಿನಗಳ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಬೃಹತ್ ಸಮಾರೋಪ ಸಮಾವೇಶಕ್ಕೆ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬಳ್ಳಾರಿ ನಗರದಲ್ಲಿ ವಿವಿಧ ಸಮುದಾಯಗಳ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಸಮಾರೋಪ ಸಮಾವೇಶದ ಹಿನ್ನೆಲೆಯಲ್ಲಿ ಗುರುವಾರ ಬಳ್ಳಾರಿಗೆ ಆಗಮಿಸಿದ ವಿಜಯೇಂದ್ರ ಅವರು ಮೊದಲು ನಗರದ ಆರಾಧ್ಯ ದೈವ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಬೃಹತ್ ಕ್ರೇನ್ ಮೂಲಕ ಹಾರ ಹಾಕಿ ವಿಜಯೇಂದ್ರ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

ಬಳಿಕ ಗವಿಯಪ್ಪ ವೃತ್ತದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ವಿಜಯೇಂದ್ರ, ನಂತರ ಡಾ. ಬಾಬು ಜಗಜೀವನ್ ರಾಮ್ ಅವರ ಪ್ರತಿಮೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಗೌರವ ಸಲ್ಲಿಸಿದರು. ಕುಮಾರಸ್ವಾಮಿ ದೇವಸ್ಥಾನದ ಬಳಿಯಿರುವ ಕನಕದಾಸರ ಪ್ರತಿಮೆಗೂ ಮಾಲಾರ್ಪಣೆ ಮಾಡಿದರು. ನಗರದ ಕೋಟೆ ಮಲ್ಲೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ವಿವಿಧ ಸಮುದಾಯಗಳ ಮಹನೀಯರಿಗೆ ಗೌರವ ಸಲ್ಲಿಸುವ ವೇಳೆ ಆಯಾ ಸಮುದಾಯಗಳ ಶಾಲು ಧರಿಸುವ ಮೂಲಕ ವಿಜಯೇಂದ್ರ ಗಮನ ಸೆಳೆದರು. ಬಿಜೆಪಿ ನಾಯಕರ ಪ್ರಕಾರ, ಈ ಮೂಲಕ ವಿವಿಧ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸುವ ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶ ಸಾರುವ ಪ್ರಯತ್ನ ನಡೆದಿದೆ.

ವಿಜಯೇಂದ್ರ ಅವರ ನಗರ ಸಂಚಾರದ ವೇಳೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಅವರನ್ನು ಹೂಮಾಲೆ ಹಾಕಿ ಸ್ವಾಗತಿಸಿದರು. ಹಲವೆಡೆ ಕ್ರೇನ್‌ಗಳ ಮೂಲಕ ಬೃಹತ್ ಹಾರ ಹಾಕಿ ಹಾಗೂ ಹೂವಿನ ಸುರಿಮಳೆಗೈದು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಬಿಷಪ್ ಹೌಸ್‌ಗೂ ಭೇಟಿ : ಇದೇ ವೇಳೆ ವಿಜಯೇಂದ್ರ ಅವರು ನಗರದ ಕ್ರಿಶ್ಚಿಯನ್ ಸಮುದಾಯದ ಬಿಷಪ್ ಹೌಸ್‌ಗೆ ಭೇಟಿ ನೀಡಿದರು. ಸಮುದಾಯದ ಪ್ರಮುಖರು ಹಾಗೂ ಧರ್ಮಗುರುಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಅವರ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಧರ್ಮಗುರುಗಳು ವಿಜಯೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಿದರು.

ಸಮಾವೇಶಕ್ಕೆ ಸಾವಿರಾರು ಕಾರ್ಯಕರ್ತರು : ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಬಳ್ಳಾರಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಹಾಗೂ ಸಾರ್ವಜನಿಕರು ಆಗಮಿಸಿದ್ದರು. ನಗರದ ಹಲವು ಭಾಗಗಳಲ್ಲಿ ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದು, ಸಮಾವೇಶದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದವು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿಕ ಅವರ ಪುತ್ರ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಈ ಬೃಹತ್ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮ ಬಿಜೆಪಿ ಸಂಘಟನಾ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ. ಸರ್ಕಾರದ ವಿರುದ್ಧದ ರಾಜಕೀಯ ಹೋರಾಟದ ಸಂದೇಶದೊಂದಿಗೆ ಸಮಾವೇಶ ಆಯೋಜಿಸಲಾಗಿದ್ದರೂ, ಅದಕ್ಕೂ ಮುನ್ನ ವಿಜಯೇಂದ್ರ ಅವರು ವಿವಿಧ ಸಮುದಾಯಗಳ ಮಹನೀಯರಿಗೆ ಗೌರವ ಸಲ್ಲಿಸಿರುವುದು ಕಾರ್ಯಕ್ರಮಕ್ಕೆ ಸಾಮಾಜಿಕ ಸಾಮರಸ್ಯದ ಆಯಾಮವನ್ನು ನೀಡಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.