ವಿಶ್ವ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ರಷ್ಯಾ, ಉಕ್ರೇನ್ ಯುದ್ಧದಿಂದ ಕಪ್ಪು ಸಮುದ್ರದ ಮೂಲಕ ನಡೆಯುತ್ತಿರುವ ಧಾನ್ಯ ರಫ್ತು ವ್ಯತ್ಯಯಗೊಂಡಿರುವುದು ಮತ್ತು ಹಲವು ಪ್ರಮುಖ ಗೋಧಿ ಉತ್ಪಾದನಾ ಪ್ರದೇಶಗಳಲ್ಲಿ ಬರ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿ ಉಂಟಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ದಿನನಿತ್ಯ ಬಳಸುವ ಸಾಮಗ್ರಿಗಳಲ್ಲಿ ಇದೀಗ ಮತ್ತೊಂದು ಹೊಡೆತ, ಈರುಳ್ಳಿ, ಬೆಲ್ಲ, ಸಕ್ಕರೆ, ಬೆಲೆಗಳಲ್ಲಿ ಸತತ ಏರಿಕೆ ಕಂಡಿದ್ದು ಮತ್ತೆ ಈಗ ಗೋದಿಯಲ್ಲಿ ಕೂಡ ಬೆಲೆ ಏರಿಕೆ ಕಂಡು ಮಧ್ಯಮ ಕುಟುಂಬ ಮೇಲೆ ನೇರ ಹೊಡೆತ ಬೀಳಲಿದೆ.
ಜಾಗತಿಕ ಗೋಧಿ ಮಾರುಕಟ್ಟೆಯಲ್ಲಿ ಪೂರೈಕೆಯ ಬಗ್ಗೆ ಆತಂಕ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಗೋಧಿ ಬೆಲೆಗಳು ಸುಮಾರು ಮೂರು ವರ್ಷಗಳ ಗರಿಷ್ಠ ಮಟ್ಟದತ್ತ ಏರಿವೆ.
ಗೋಧಿ ಬೆಲೆಯಲ್ಲಿ ದಿಢೀರ್ ಏರಿಕೆಗೆ ಕಾರಣ
ರಷ್ಯಾ ಮತ್ತು ಉಕ್ರೇನ್ ಜಾಗತಿಕ ಗೋಧಿ ರಫ್ತಿನಲ್ಲಿ ಪ್ರಮುಖ ಸ್ಥಾನ ಹೊಂದಿವೆ. ಎರಡೂ ದೇಶಗಳು ಸೇರಿ ಜಾಗತಿಕ ಗೋಧಿ ರಫ್ತಿನ ಸುಮಾರು ಶೇ.27ರಷ್ಟು ಪಾಲು ಹೊಂದಿವೆ. ಕಪ್ಪು ಸಮುದ್ರದ ಬಂದರುಗಳು, ಧಾನ್ಯ ಟರ್ಮಿನಲ್‌ಗಳು ಮತ್ತು ಸಾಗಣೆ ಮಾರ್ಗಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದ ಹಡಗು ಸಂಚಾರ ಹಾಗೂ ಧಾನ್ಯ ರಫ್ತಿಗೆ ಅಡ್ಡಿಯಾಗಿದೆ.
ಯುರೋಪ್‌ನ ಕೆಲವು ಭಾಗಗಳಲ್ಲಿಯೂ ಬರ ಮತ್ತು ಹೆಚ್ಚಿನ ತಾಪಮಾನದಿಂದ ಗೋಧಿ ಹಾಗೂ ಇತರ ಧಾನ್ಯಗಳ ಇಳುವರಿ ಮೇಲೆ ಪರಿಣಾಮ ಬೀರಿದೆ. ಮುಂಬರುವ ಎಲ್ ನಿನೊ ಪರಿಸ್ಥಿತಿಯೂ ಕೆಲವು ಉತ್ಪಾದಕ ದೇಶಗಳಲ್ಲಿ ಬೆಳೆ ಉತ್ಪಾದನೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಆಹಾರ ಬೆಲೆಗಳ ಮೇಲೂ ಪರಿಣಾಮ
ಗೋಧಿ ಬೆಲೆ ಏರಿಕೆ ಕೇವಲ ಜಾಗತಿಕ ಸರಕು ಮಾರುಕಟ್ಟೆಗೆ ಸೀಮಿತವಾಗಿಲ್ಲ. ಗೋಧಿ ಹಿಟ್ಟು, ಬ್ರೆಡ್, ಬಿಸ್ಕತ್, ಪಾಸ್ತಾ ಸೇರಿದಂತೆ ಹಲವು ಆಹಾರ ಉತ್ಪನ್ನಗಳ ಬೆಲೆಯ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, 2026ರ ಆಗಸ್ಟ್‌ನಲ್ಲಿ ಜಾಗತಿಕ ಆಹಾರ ಬೆಲೆ ಸೂಚ್ಯಂಕವು 2022ರ ಅಂತ್ಯದ ನಂತರದ ಗರಿಷ್ಠ ಮಟ್ಟಕ್ಕೆ ಏರಿದೆ.
ಮುಂದಿನ ದಿನಗಳಲ್ಲಿ ರಷ್ಯಾ – ಉಕ್ರೇನ್ ಸಂಘರ್ಷ ಮತ್ತು ಕಪ್ಪು ಸಮುದ್ರದ ಸಾಗಣೆ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದರ ಮೇಲೆ ಗೋಧಿ ಬೆಲೆಯ ದಿಕ್ಕು ಬಹುಮಟ್ಟಿಗೆ ಅವಲಂಬಿತವಾಗಿದೆ. ಪೂರೈಕೆ ವ್ಯತ್ಯಯ ಮುಂದುವರಿದರೆ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಗಳ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.



















