SK Home Ad
Home ನಮ್ಮ ಜಿಲ್ಲೆ ಗದಗ ಮೊಬೈಲ್ ಕಸಿದುಕೊಂಡಿದ್ದಕ್ಕೆ ಮನನೊಂದು 16ರ ಬಾಲಕಿ ಆತ್ಮಹತ್ಯೆ

ಮೊಬೈಲ್ ಕಸಿದುಕೊಂಡಿದ್ದಕ್ಕೆ ಮನನೊಂದು 16ರ ಬಾಲಕಿ ಆತ್ಮಹತ್ಯೆ

0
54

ಗದಗ: ಕೈಯಲ್ಲಿದ್ದ ಮೊಬೈಲ್‌ ಕಸಿದುಕೊಂಡಿದ್ದಕ್ಕೆ ಮನನೊಂದು 16 ವರ್ಷದ ಬಾಲಕಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಗದಗದಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಗೌತಮಿ ಶ್ರೀನಿವಾಸ ಚಿತ್ರಗಾರ ಎಂದು ಗುರುತಿಸಲಾಗಿದೆ.

ಭಾನುವಾರ ತಡರಾತ್ರಿ ಗೌತಮಿ ಮೊಬೈಲ್‌ ನೋಡುತ್ತಿದ್ದ ವೇಳೆ ಆಕೆಯ ಸಹೋದರ ಮೊಬೈಲ್‌ ಕಸಿದುಕೊಂಡು ತಾಯಿಗೆ ನೀಡಿದ್ದ ಎನ್ನಲಾಗಿದೆ. ಮೊಬೈಲ್‌ ಕಸಿದುಕೊಂಡಿದ್ದರೂ ತಾಯಿ ತನ್ನ ತಮ್ಮನಿಗೆ ಯಾವುದೇ ರೀತಿಯಲ್ಲಿ ಪ್ರಶ್ನಿಸಲಿಲ್ಲ ಎಂಬ ಬೇಸರ ಗೌತಮಿಯನ್ನು ಕಾಡಿತ್ತು ಎನ್ನಲಾಗಿದೆ.

ಈ ಸಣ್ಣ ಘಟನೆ ಇಷ್ಟೊಂದು ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ ಎಂದು ಕುಟುಂಬಸ್ಥರು ಕೂಡ ಊಹಿಸಿರಲಿಲ್ಲ. ಮನನೊಂದ ಗೌತಮಿ ಮನೆಯಲ್ಲಿದ್ದ ವಿಷಕಾರಿ ವಸ್ತು ಸೇವಿಸಿದ್ದಾಳೆ. ವಿಷಯ ತಿಳಿದು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಮುದ್ದಾಗಿ ಬೆಳೆಸಿದ್ದ ಮಗಳ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಬದುಕಿನ ಕನಸುಗಳನ್ನು ಕಾಣಬೇಕಿದ್ದ ಬಾಲಕಿಯೊಬ್ಬಳು ಕ್ಷಣಿಕ ಬೇಸರದಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದು ಎಲ್ಲರನ್ನೂ ಕಳವಳಕ್ಕೀಡು ಮಾಡಿದೆ.

ಘಟನೆ ಕುರಿತು ಗದಗ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.