ಕೊಪ್ಪಳ: ಕಾಂಗ್ರೆಸ್ ಸರ್ಕಾರದ ವಿರುದ್ಧದ ಆರೋಪಗಳು ಹಾಗೂ ವಿವಿಧ ಜನಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಶನಿವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಾಗುತ್ತಿರುವ ಯಾತ್ರೆ ಕಾರಟಗಿ ಮೂಲಕ ಬಳ್ಳಾರಿಯತ್ತ ಮುಂದುವರಿದಿದೆ.
ಐದನೇ ದಿನದ ಪಾದಯಾತ್ರೆಗೆ ಕಾರಟಗಿಯಲ್ಲಿ ಗೋಪೂಜೆ ನೆರವೇರಿಸಿ, ಹಿರಿಯರ ಆಶೀರ್ವಾದ ಪಡೆದು ಚಾಲನೆ ನೀಡಲಾಯಿತು. ಬಳಿಕ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯೇಂದ್ರ ಹಾಗೂ ಪಕ್ಷದ ಮುಖಂಡರು ನಾಡಿನ ಒಳಿತಿಗಾಗಿ ಮತ್ತು ಜನಾಂದೋಲನದ ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಯಾತ್ರೆಯಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಾಲ್ಕನೇ ದಿನದ ಯಾತ್ರೆಯಲ್ಲಿಯೂ ಸಾಮಾಜಿಕ ಭದ್ರತಾ ಪಿಂಚಣಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ, ರೈತರ ಸಮಸ್ಯೆಗಳು, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ವಿಷಯಗಳನ್ನು ಬಿಜೆಪಿ ಪ್ರಮುಖವಾಗಿ ಪ್ರಸ್ತಾಪಿಸಿತ್ತು.
ಐದನೇ ದಿನದ ಯಾತ್ರೆಯಲ್ಲಿ ನವಲಿ ಜಲಾಶಯ ನಿರ್ಮಾಣ ಹಾಗೂ ನೀರಾವರಿ ಸಮಸ್ಯೆ ಪ್ರಮುಖ ವಿಚಾರವಾಗಿ ಪ್ರಸ್ತಾಪಗೊಂಡಿದೆ. ಕಾರಟಗಿಯ ನವಲಿ ಕ್ರಾಸ್‌ನಿಂದ ಪಾದಯಾತ್ರೆ ಮುಂದುವರಿಯಲಿದೆ ಎಂದು ವರದಿಗಳು ತಿಳಿಸಿವೆ. ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ. ಶ್ರೀರಾಮುಲು, ವಿ. ಸುನಿಲ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಈಗಾಗಲೇ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ರಾಯಚೂರಿನ ಲಿಂಗಸುಗೂರಿನಿಂದ ಆರಂಭಗೊಂಡಿರುವ ಈ ಪಾದಯಾತ್ರೆ ಸುಮಾರು 10 ದಿನಗಳ ಕಾಲ 185 ಕಿ.ಮೀ. ಸಾಗಲಿದ್ದು, ಮಾಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ, ಸಂಡೂರು ಮಾರ್ಗವಾಗಿ ಬಳ್ಳಾರಿ ತಲುಪಲಿದೆ ಎಂದು ಬಿಜೆಪಿ ತಿಳಿಸಿದೆ.
ಬಿಜೆಪಿ ಪಾಲಿಗೆ ‘ಬಳ್ಳಾರಿ ಚಲೋ’ ಕೇವಲ ಪಾದಯಾತ್ರೆಯಾಗಿರದೆ, ರಾಜ್ಯ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವ ರಾಜಕೀಯ ಅಭಿಯಾನವಾಗಿಯೂ ಕಾಣಿಸುತ್ತಿದೆ. ಮುಂಬರುವ ದಿನಗಳಲ್ಲಿ ಯಾತ್ರೆ ಬಳ್ಳಾರಿ ಭಾಗ ಪ್ರವೇಶಿಸುತ್ತಿದ್ದಂತೆ ಹೋರಾಟದ ಸ್ವರೂಪ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















