ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ಬೇಲ್’ ಸಿನಿಮಾ ಬಿಡುಗಡೆಗೂ ಮುನ್ನವೇ ಸಂಗೀತದ ಮೂಲಕ ಗಮನ ಸೆಳೆಯುತ್ತಿದೆ. ಚಿತ್ರದ ಮೊದಲ ಸಿಂಗಲ್ ‘ಚೆಲುವೆ ಕೇಳೆ ಚೆಲುವೆ’ ಇಂದು ಬಿಡುಗಡೆಯಾಗಿದೆ.
ರೊಮ್ಯಾಂಟಿಕ್ ಮೆಲೋಡಿಯ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಈ ಹಾಡನ್ನು ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಹಾಡಿನ ಸಾಹಿತ್ಯವನ್ನು ನಿರ್ದೇಶಕ ಪವನ್ ಒಡೆಯರ್ ಬರೆದಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಹಾಡು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
‘ಚೆಲುವೆ ಕೇಳೆ ಚೆಲುವೆ’ ಹಾಡಿನಲ್ಲಿ ದೀಕ್ಷಿತ್ ಶೆಟ್ಟಿ ಹಾಗೂ ಸಂಜನಾ ಆನಂದ್ ಅವರ ನಡುವಿನ ಪ್ರೇಮಭಾವ ಮತ್ತು ಮುದ್ದಾದ ಕೆಮಿಸ್ಟ್ರಿಯನ್ನು ಕಟ್ಟಿಕೊಡಲಾಗಿದೆ. ಮೊದಲ ಪ್ರೀತಿಯಲ್ಲಿನ ಹೊಸತನ, ಆಕರ್ಷಣೆ ಮತ್ತು ಪ್ರೇಮದ ತುಡಿತವನ್ನು ಹಾಡಿನ ಸಾಹಿತ್ಯ ಹಾಗೂ ದೃಶ್ಯಗಳಲ್ಲಿ ಮೂಡಿಸಲಾಗಿದೆ.
ಹಾಡಿಗೆ ಕೆ.ಎಸ್. ಹರಿಶಂಕರ್ ಮತ್ತು ಹರ್ಷಿಕಾ ದೇವನಾಥ್ ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಅವರ ಮೆಲೋಡಿಯಸ್ ಸಂಗೀತಕ್ಕೆ ಪವನ್ ಒಡೆಯರ್ ಅವರ ಸರಳ ಹಾಗೂ ಪ್ರೇಮಭರಿತ ಸಾಹಿತ್ಯ ಸಾಥ್ ನೀಡಿದ್ದು, ಚಿತ್ರದ ರೊಮ್ಯಾಂಟಿಕ್ ಟ್ರ್ಯಾಕ್ ಆಗಿ ಹಾಡು ಕುತೂಹಲ ಮೂಡಿಸಿದೆ.
ಇನ್ನು ‘ಬೇಲ್’ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದ್ದು, ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್, ಸಾಯಿಕುಮಾರ್, ಜಯರಾಮ್, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ವೈದಿ ಅವರ ಛಾಯಾಗ್ರಹಣ ಮತ್ತು ಶಶಾಂಕ್ ನಾರಾಯಣ್ ಸಂಕಲನ ಚಿತ್ರಕ್ಕಿದೆ.
ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್‌ನಲ್ಲಿ ಶಿವರಾಜ್‌ಕುಮಾರ್ ಅವರನ್ನು ವಿಭಿನ್ನ ಹಾಗೂ ಸ್ಟೈಲಿಶ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪರಿಚಯಿಸಲಾಗಿದ್ದು, ‘ಬೇಲ್’ ಕ್ರೈಂ–ಆ್ಯಕ್ಷನ್ ಡ್ರಾಮಾ ಹಿನ್ನೆಲೆಯಲ್ಲಿ ಸಾಗಲಿದೆ ಎಂಬ ಕುತೂಹಲ ಮೂಡಿಸಿದೆ. ಸಿನಿಮಾ ಅಕ್ಟೋಬರ್ 2, 2026ರಂದು ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ.
ಹೀಗಾಗಿ ‘ಚೆಲುವೆ ಕೇಳೆ ಚೆಲುವೆ’ ಮೂಲಕ ಚಿತ್ರದ ಮತ್ತೊಂದು ಮುಖವನ್ನು ಪರಿಚಯಿಸಿರುವ ಚಿತ್ರತಂಡ, ಟೀಸರ್‌ನಲ್ಲಿ ಕಂಡಿದ್ದ ಆ್ಯಕ್ಷನ್ ಮತ್ತು ಕ್ರೈಂ ಹಿನ್ನೆಲೆಯ ಜೊತೆಗೆ ಪ್ರೇಮಕಥೆಯ ಅಂಶವನ್ನೂ ಪ್ರೇಕ್ಷಕರಿಗೆ ತೋರಿಸಿದೆ. ಇದೀಗ ಈ ಹಾಡಿಗೆ ಪ್ರೇಕ್ಷಕರಿಂದ ಸಿಗುವ ಪ್ರತಿಕ್ರಿಯೆ ‘ಬೇಲ್’ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















