ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ಕ್ಕೆ ಅದ್ದೂರಿ ಚಾಲನೆ ಸಿಗಲು ಕ್ಷಣಗಣನೆ ಆರಂಭವಾಗಿದೆ. ಪ್ರಸ್ತುತ ಸೀಸನ್‌ನ ಭಾಗವಾಗಿ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮವು ಇದೀಗ ಅಂತಿಮ ಹಂತ ತಲುಪಿದ್ದು, ಸಖತ್ ಟ್ವಿಸ್ಟ್ ನೀಡುತ್ತಿದೆ. ಹಾಗೇ ಈ ಶನಿವಾರ ಅದ್ಧೂರಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಸಾಮಾನ್ಯ ಸ್ಪರ್ಧಿಗಳಿಗಾಗಿ ಆಯೋಜಿಸಲಾಗಿದ್ದ ಈ ‘ಅಗ್ನಿಪರೀಕ್ಷೆ’ಯಲ್ಲಿ ಹಲವು ಕಠಿಣ ಸವಾಲುಗಳು ಹಾಗೂ ಟಾಸ್ಕ್‌ಗಳ ಮೂಲಕ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಟಾಪ್ 10 ಸ್ಪರ್ಧಿಗಳ ಪೈಕಿ 3 ಜನ ಯಾರು ಗೆದ್ದು ಮುಖ್ಯ ಮನೆಗೆ ಪ್ರವೇಶಿಸಲಿದ್ದಾರೆ ಎಂಬ ಕುತೂಹಲಕ್ಕೆ ಭಾನುವಾರ ಕಿಚ್ಚ ಸುದೀಪ್ ಸಮ್ಮುಖದಲ್ಲಿ ತೆರೆಬೀಳಲಿದೆ. ಅಂತಿಮ ಹಂತದಲ್ಲಿ ಗೆಲ್ಲುವ ಮೂವರು ಪ್ರಮುಖ ಸ್ಪರ್ಧಿಗಳು ದೊಡ್ಮನೆಗೆ ನೇರ ಪ್ರವೇಶ ಗಿಟ್ಟಿಸಿಕೊಳ್ಳಲಿದ್ದಾರೆ.
ಸದ್ಯ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಈ ಶನಿವಾರ ಸಂಜೆ 7 ಗಂಟೆಗೆ ‘ಕಲರ್ಸ್ ಕನ್ನಡ’ ವಾಹಿನಿ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಮರುದಿನ ಅಂದರೆ ಭಾನುವಾರ ಸಂಜೆ 6 ಗಂಟೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಗ್ರ್ಯಾಂಡ್ ಓಪನಿಂಗ್ ಕಿಚ್ಚ ಸುದೀಪ್ ನೆರವೇರಿಸಲಿದ್ದಾರೆ. ಅಲ್ಲದೇ ಹೊಸ ಸೀಸನ್‌ನ ಪೂರ್ಣ ಪ್ರಮಾಣದ ಆಟಕ್ಕೆ ಅಧಿಕೃತ ಚಾಲನೆ ಅಂದೇ ಸಿಗಲಿದೆ.





















