ಪ್ರಮೋದ್ ನಾಯಕನಾಗಿ ನಟಿಸುತ್ತಿರುವ ಈ ವರ್ಷದ ಬಹುನಿರೀಕ್ಷಿತ ಹಲ್ಕಾ ಡಾನ್ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದೆ. ಕನ್ನಡ, ತೆಲುಗಿನಲ್ಲಿ ಏಕಕಾಲದಲ್ಲಿ ತಯಾರಾಗುತ್ತಿದ್ದ ಈ ಸಿನಿಮಾ ಇದೀಗ ತುಳು ಭಾಷೆಯಲ್ಲೂ ಬಿಡುಗಡೆಯಾಗಲು ಸಕಲ ತಯಾರಿ ಮಾಡಿಕೊಳ್ಳುತ್ತಿದೆ ಚಿತ್ರತಂಡ. ಇತ್ತೀಚೆಗೆ ಮಂಗಳೂರಿನಲ್ಲಿರುವ ಕುತ್ತಾರು ಬಳಿಯ ಕೊರಗಜ್ಜ ಆದಿಸ್ಥಳಕ್ಕೆ ‘…ಡಾನ್’ ಬಳಗ ಭೇಟಿ ನೀಡಿ ಬಂದಿದೆ.
ಟಗರು, ಸಲಗ ಹಾಗೂ ಯುಐ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿರುವ ಕೆ.ಪಿ.ಶ್ರೀಕಾಂತ್, ‘ಹಲ್ಕಾ ಡಾನ್’ಗೆ ಬಂಡವಾಳ ಹೂಡಿದ್ದಾರೆ. ವೀನಸ್ ಎಂಟರ್ಟೈನರ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ನಾಲ್ಕನೇ ಚಿತ್ರ ಇದಾಗಿದ್ದು, ಚಲ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಸಾಯಿಕುಮಾರ್ ಫ್ಯಾನ್’ ಎಂಬ ಅಡಿಬರಹ ಈ ಚಿತ್ರಕ್ಕಿದ್ದು, ಸಾಯಿಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ.
ಪ್ರಮೋದ್ಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಇದ್ದಾರೆ. ಬಹುಭಾಷಾ ನಟ ಜಾನ್ ವಿಜಯ್, ಹಲ್ಕಾ ಡಾನ್ ಚಿತ್ರದ ಗಮನಾರ್ಹ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದೆ.





















