SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಹಪ್ತಾ ವಸೂಲಿ ಆಡಿಯೋ ವೈರಲ್ : ಮೂವರು PSIಗಳ ತಲೆದಂಡ

ಹಪ್ತಾ ವಸೂಲಿ ಆಡಿಯೋ ವೈರಲ್ : ಮೂವರು PSIಗಳ ತಲೆದಂಡ

0
665

ದಾಂಡೇಲಿ (ಸಂ. ಕ. ಸಮಾಚಾರ) : ದಾಂಡೇಲಿ ಅಪರಾಧ ವಿಭಾಗದಲ್ಲಿದ್ದ ಕಿರಣ್ ಪಾಟೀಲ್, ಹಳಿಯಾಳದ ವಿನೋದ ರೆಡ್ಡಿ, ಅಪರಾಧ ವಿಭಾಗದ ಪಿಎಸ್ ಐ ಕೃಷ್ಣ ಸಸ್ಪೆಂಡ್ ಆಗಿದ್ದಾರೆ. ವರ್ಗಾವಣೆಗಾಗಿ ಕಮಿಷನ್ ಹಾಗೂ ಹಿರಿಯ ಅಧಿಕಾರಿಗಳಿಗೆ ‘ಮಂತ್ಲಿ’ (ಮಾಸಿಕ ಹಪ್ತಾ) ನೀಡುವ ಬಗ್ಗೆ ಮಾತನಾಡಿಕೊಂಡಿದ್ದ ಆಡಿಯೋ, ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಮೂವರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳನ್ನು , ಕಾರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಆಡಿಯೋದಲ್ಲಿ ಮಂತ್ಲಿ ಗಮ್ಮತ್ತು: ಹಳಿಯಾಳ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ (L&O) ವಿಭಾಗದ ( ದಾಂಡೇಲಿ ಕ್ರೈಂ ವಿಭಾಗದಿಂದ ವರ್ಗವಾಗಿ ಒಂದು ವಾರ ಆಗಿಲ್ಲ) ಪಿಎಸ್‌ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್‌ಐ ಕೃಷ್ಣ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್‌ಐ ಆಗಿದ್ದ ವಿನೋದ್ ರೆಡ್ಡಿ ನಡುವೆ ನಡೆದಿದ್ದ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ಇತ್ತೀಚೆಗೆ ಜೆಡಿಎಸ್ ಪಕ್ಷದ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ವೈರಲ್ ಆಗಿತ್ತು. ಈ ಆಡಿಯೋದಲ್ಲಿ, ಎಲ್ ಅಂಡ್ ಒ (L&O) ಪಿಎಸ್‌ಐ ಸ್ಥಾನ ಪಡೆಯಲು ನಡೆದಿದ್ದ ಹಣದ ಡೀಲ್ ಹಾಗೂ ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿಗಳಿಗೆ ಪ್ರತಿ ತಿಂಗಳು ನೀಡಬೇಕಾದ ‘ಮಂತ್ಲಿ’ ಹಣದ ಬಗ್ಗೆ ಈ ಮೂವರು ಅಧಿಕಾರಿಗಳು ಬಹಿರಂಗವಾಗಿ ಮಾತನಾಡಿಕೊಂಡಿದ್ದರು. ಇದು ಪೊಲೀಸ್ ಇಲಾಖೆ ಹಾಗೂ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು.

ಮೂವರ PSI ಗಳ ತಲೆದಂಡ : ಆಡಿಯೋ ಭಾರಿ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ, ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಎಎಸ್‌ಪಿ ಕೃಷ್ಣಮೂರ್ತಿ ಅವರು ನಡೆಸಿ ಸಲ್ಲಿಸಿದ ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ, ಇಲಾಖೆಯ ಶಿಸ್ತು ಮತ್ತು ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಎಸ್‌ಪಿ ದೀಪನ್ ಎಂ.ಎನ್. ಅವರು ಮೂವರೂ ಪಿಎಸ್‌ಐಗಳನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.