SK Home Ad
Home ಸುದ್ದಿ ರಾಜ್ಯ ‘ಮನ್‌ ಕಿ ಬಾತ್‌’ನಲ್ಲಿ ಬೆಂಗಳೂರಿನ ನಿಂಗಮ್ಮ ಸಾಧನೆಗೆ ಮೋದಿ ಮೆಚ್ಚುಗೆ

‘ಮನ್‌ ಕಿ ಬಾತ್‌’ನಲ್ಲಿ ಬೆಂಗಳೂರಿನ ನಿಂಗಮ್ಮ ಸಾಧನೆಗೆ ಮೋದಿ ಮೆಚ್ಚುಗೆ

0
101

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್‌ ಕಿ ಬಾತ್‌’ನ 137ನೇ ಆವೃತ್ತಿಯಲ್ಲಿ ಬೆಂಗಳೂರಿನ ಮಹಿಳಾ ಉದ್ಯಮಿ ಟಿ.ಎಸ್. ನಿಂಗಮ್ಮ ಅವರ ಯಶೋಗಾಥೆ ದೇಶದ ಗಮನ ಸೆಳೆಯಿತು.

ಕೇಂದ್ರ ಸರ್ಕಾರದ ‘ಪಿಎಂ ಸ್ವನಿಧಿ’ ಯೋಜನೆಯ ನೆರವು ಪಡೆದುಕೊಂಡು ಸಣ್ಣ ವ್ಯಾಪಾರವನ್ನು ಅಭಿವೃದ್ಧಿಪಡಿಸಿಕೊಂಡಿರುವ ನಿಂಗಮ್ಮ ಅವರ ಸಾಧನೆಯನ್ನು ಪ್ರಧಾನಿ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದರು.

ನಿಂಗಮ್ಮ ಅವರು ತಮ್ಮ ಪತಿಯೊಂದಿಗೆ ಸೇರಿ ಇಡ್ಲಿ, ದೋಸೆ ಮತ್ತು ಸಾಂಬಾರ್ ಮಾರಾಟ ಮಾಡುವ ಸಣ್ಣ ವ್ಯಾಪಾರ ಆರಂಭಿಸಿದ್ದರು. ವ್ಯಾಪಾರ ಉತ್ತಮವಾಗಿ ನಡೆಯುತ್ತಿದ್ದರೂ ಅದನ್ನು ಮತ್ತಷ್ಟು ವಿಸ್ತರಿಸಲು ಬಂಡವಾಳದ ಅಗತ್ಯವಿತ್ತು. ಈ ಸಂದರ್ಭದಲ್ಲಿ ‘ಪಿಎಂ ಸ್ವನಿಧಿ’ ಯೋಜನೆಯಿಂದ ಅವರಿಗೆ ಆರ್ಥಿಕ ನೆರವು ದೊರೆಯಿತು.

ಯೋಜನೆಯ ನೆರವಿನಿಂದ ನಿಂಗಮ್ಮ ಅವರು ತಮ್ಮ ತಳ್ಳುವ ಗಾಡಿಯನ್ನು ಉತ್ತಮಗೊಳಿಸಿದರು. ಅಗತ್ಯ ಸಾಮಗ್ರಿಗಳನ್ನು ಸಗಟು ದರದಲ್ಲಿ ಖರೀದಿಸಲು ಆರಂಭಿಸಿದರು. ಜತೆಗೆ ತಿಂಡಿಗಳ ಪಟ್ಟಿಗೆ ಹಲವು ಹೊಸ ಪದಾರ್ಥಗಳನ್ನು ಸೇರ್ಪಡೆಗೊಳಿಸಿದರು. ಇದರಿಂದ ಗ್ರಾಹಕರ ಸಂಖ್ಯೆ ಹೆಚ್ಚಾಗಿ ಆದಾಯವೂ ವೃದ್ಧಿಯಾಯಿತು. ಪರಿಣಾಮ ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡುಬಂತು.

ಇದೀಗ ನಿಂಗಮ್ಮ ಅವರು ತಮ್ಮ ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಷ್ಟು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ಪ್ರಧಾನಿ ಮೋದಿ ‘ಮನ್‌ ಕಿ ಬಾತ್‌’ನಲ್ಲಿ ತಿಳಿಸಿದರು.

‘ಮಹಿಳಾ ಸಬಲೀಕರಣದ ಜೀವಂತ ಉದಾಹರಣೆ’: ಮಹಿಳೆಯೊಬ್ಬರ ವ್ಯಾಪಾರ ಬೆಳೆದಾಗ ಅದರೊಂದಿಗೆ ಇಡೀ ಕುಟುಂಬದ ಭವಿಷ್ಯವೂ ಅಭಿವೃದ್ಧಿಯಾಗುತ್ತದೆ. ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಾರೆ, ಮನೆಯ ಅಗತ್ಯಗಳು ಈಡೇರುತ್ತವೆ ಮತ್ತು ಮಹಿಳೆಯ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಇದು ಮಹಿಳಾ ಸಬಲೀಕರಣದ ಜೀವಂತ ಉದಾಹರಣೆಯಾಗಿದೆ ಎಂದು ಮೋದಿ ಹೇಳಿದರು.

ರಸ್ತೆಬದಿ ವ್ಯಾಪಾರ ನಡೆಸುತ್ತಿರುವ ಎಲ್ಲ ಮಹಿಳೆಯರಿಗೂ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದ ಪ್ರಧಾನಿ, ಸ್ವಾವಲಂಬನೆಯತ್ತ ಹೆಜ್ಜೆ ಇಡುತ್ತಿರುವ ಮಹಿಳೆಯರ ಸಾಧನೆಗಳನ್ನು ಶ್ಲಾಘಿಸಿದರು.