SK Home Ad
Home ಸುದ್ದಿ ದೇಶ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಸೇರಿ ಇಬ್ಬರು ಸಾವು

ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಸೇರಿ ಇಬ್ಬರು ಸಾವು

0
85

ಕಾನ್ಪುರ: ತರಬೇತಿ ವಿಮಾನವೊಂದು ಪತನಗೊಂಡ ಪರಿಣಾಮ ಕರ್ನಾಟಕ ಮೂಲದ ಪೈಲಟ್‌ ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರದ ಗಂಗಾ ನದಿ ದಂಡೆಯ ಸಮೀಪದ ಕತ್ರಿ ಪ್ರದೇಶದ ನಾಥಪುರವಾ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಗಾರ್ಗ್ ಏವಿಯೇಷನ್ ತರಬೇತಿ ಕೇಂದ್ರದಿಂದ ಬೆಳಿಗ್ಗೆ 11.30ರ ಸುಮಾರಿಗೆ ಟ್ವಿನ್‌ ಎಂಜಿನ್‌ ಹೊಂದಿರುವ ಟೆಕ್ನಾಮ್ ತರಬೇತಿ ವಿಮಾನ ಹಾರಾಟ ಆರಂಭಿಸಿತ್ತು. ಸುಮಾರು 20 ನಿಮಿಷಗಳ ಬಳಿಕ ತರಬೇತಿ ಕೇಂದ್ರಕ್ಕೆ ಹಿಂದಿರುಗುತ್ತಿದ್ದ ವೇಳೆ ವಿಮಾನ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗುಜರಾತ್ ಮೂಲದ ತರಬೇತುದಾರ ಸಚಿನ್ ಭಾಟಿಯಾ ಹಾಗೂ ಕರ್ನಾಟಕ ಮೂಲದ ತರಬೇತಿ ಪಡೆಯುತ್ತಿದ್ದ ಪೈಲಟ್ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ.

ಪೊಲೀಸ್ ಕಮಿಷನರ್ ರಘುಬೀರ್ ಲಾಲ್ ಅವರ ಮಾಹಿತಿ ಪ್ರಕಾರ, ಸಚಿನ್ ಭಾಟಿಯಾ ಅವರಿಗೆ ಸುಮಾರು 3,000 ಗಂಟೆಗಳ ಹಾರಾಟದ ಅನುಭವವಿತ್ತು. ಅಪಘಾತದ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಘಟನೆ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದೆ. ವಿಮಾನ ಪತನಕ್ಕೆ ತಾಂತ್ರಿಕ ದೋಷವೇ ಕಾರಣವೋ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.