SK Home Ad
Home ಸುದ್ದಿ ರಾಜ್ಯ ಹುಬ್ಬಳ್ಳಿ ಸೇರಿ ದೇಶದ 11 ವಿಮಾನ ನಿಲ್ದಾಣಗಳು ಖಾಸಗಿ ತೆಕ್ಕೆಗೆ..!

ಹುಬ್ಬಳ್ಳಿ ಸೇರಿ ದೇಶದ 11 ವಿಮಾನ ನಿಲ್ದಾಣಗಳು ಖಾಸಗಿ ತೆಕ್ಕೆಗೆ..!

0
37

ಹುಬ್ಬಳ್ಳಿ: ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣ ಸೇರಿದಂತೆ ದೇಶದ 11 ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರದ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮೌಲ್ಯಮಾಪನ ಸಮಿತಿ ತಾತ್ವಿಕ ಒಪ್ಪಿಗೆ ನೀಡಿದೆ.

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಭೆಯ ನಡಾವಳಿಯನ್ನು ಬಿಡುಗಡೆ ಮಾಡಲಾಗಿದೆ. ಸಮಿತಿ ಅಂತಿಮ ಅನುಮೋದನೆ ನೀಡಿದ ಬಳಿಕ ಪ್ರಸ್ತಾವವನ್ನು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಮುಂದೆ ಮಂಡಿಸಲಾಗುತ್ತದೆ.

ಅಮೃತಸರ, ಕಾಂಗ್ರಾ, ವಾರಾಣಸಿ, ಗಯಾ, ಕುಶಿನಗರ, ಭುವನೇಶ್ವರ, ರಾಯಪುರ, ಔರಂಗಾಬಾದ್, ತಿರುಚಿನಾಪಳ್ಳಿ ಹಾಗೂ ತಿರುಪತಿ ವಿಮಾನ ನಿಲ್ದಾಣಗಳು ಯೋಜನೆಯಲ್ಲಿ ಸೇರಿವೆ. ಖಾಸಗಿ ಕಂಪನಿಗಳು ಒಟ್ಟು 8,600 ಕೋಟಿ ಹೂಡಿಕೆ ಮಾಡಲಿವೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದ್ದು, ಈ ನಿಲ್ದಾಣಗಳನ್ನು ಐವತ್ತು ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗುತ್ತದೆ.

ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಆರು ವಿಮಾನ ನಿಲ್ದಾಣಗಳನ್ನು ಏಳು ವರ್ಷಗಳ ಹಿಂದೆ ಖಾಸಗೀಕರಣ ಮಾಡಲಾಗಿತ್ತು. ಎಲ್ಲ ನಿಲ್ದಾಣಗಳ ಬಿಡ್‌ಅನ್ನು ಅದಾನಿ ಸಮೂಹ ಗೆದ್ದುಕೊಂಡಿತ್ತು. ಎರಡು ವಿಮಾನ ನಿಲ್ದಾಣಗಳಿಗಷ್ಟೇ ಬಿಡ್ ಮಾಡಬೇಕೆಂಬ ನೀತಿ ಆಯೋಗದ ಪ್ರಮುಖ ಶಿಫಾರಸನ್ನು ಬದಿಗೊತ್ತಿ, ಅದಾನಿ ಸಮೂಹಕ್ಕೆ ವಿಮಾನ ನಿಲ್ದಾಣಗಳನ್ನು ಗುತ್ತಿಗೆಗೆ ನೀಡಲಾಗಿತ್ತು.

ನಿರೀಕ್ಷಿತ ವರಮಾನ ಬಾರದ ಕಾರಣದಿಂದ, ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಭುವನೇಶ್ವರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜತೆಗೆ ಈ ಹಿಂದೆ ವಿಲೀನಗೊಳಿಸಲಾಗಿತ್ತು. ಇದೀಗ, ಎರಡೂ ವಿಮಾನ ನಿಲ್ದಾಣಗಳು ಒಟ್ಟಿಗೆ ಖಾಸಗೀಕರಣಗೊಳ್ಳಲಿವೆ.