SK Home Ad
Home ನಮ್ಮ ಜಿಲ್ಲೆ ಕಲಬುರಗಿ ಅಸ್ಪೃಶ್ಯತೆ ಇನ್ನೂ ಜೀವಂತ- ಆರ್‌ಎಸ್‌ಎಸ್ ಮೌನವೇಕೆ?

ಅಸ್ಪೃಶ್ಯತೆ ಇನ್ನೂ ಜೀವಂತ- ಆರ್‌ಎಸ್‌ಎಸ್ ಮೌನವೇಕೆ?

0
12

ಕಲಬುರಗಿ: `ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆಯಲ್ಲಿದ್ದು, ಹಿಂದೂ ಹಿಂದೂ ಎಂದು ಅಬ್ಬರಿಸುವ ಆರೆಸ್ಸೆಸ್ ಇದನ್ನು ಸರಿಪಡಿಸಬೇಕಿತ್ತು. ಏಕೆ ಮೌನ ವಹಿಸಿದೆ. ಸರಸಂಘಚಾಲಕ ಮೋಹನ್ ಭಾಗವತ್ ಈ ಬಗ್ಗೆ ಏಕೆ ಮಾತನಾಡೋದಿಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಏಕೆ ತಿಳಿಹೇಳಲ್ಲ?’ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಉತ್ತರಾಖಂಡದಲ್ಲಿ ಇತ್ತೀಚೆಗೆ ತಾವು ಭಾಷಣ ಮಾಡಿದ ಸ್ಥಳ ಶುದ್ಧೀಕರಿಸಿದ್ದನ್ನು ಪ್ರಸ್ತಾಪಿಸುತ್ತ ಆರ್‌ಎಸ್‌ಎಸ್ ಮತ್ತು ಮೋದಿ, ಭಾಗವತ್‌ರನ್ನು ತರಾಟೆಗೆ ತೆಗೆದುಕೊಂಡ ಅವರು, ಹಿಂದುತ್ವದಲ್ಲಿ ನಂಬಿಕೆಯಿರುವವರನ್ನು ಮೆಚ್ಚಿಸಿ ಮತಗಳಿಸುವುದಕ್ಕಾಗಿ ಶುದ್ಧೀಕರಣದ ನಾಟಕವಾಡಿದ್ದು, ಇಂಥದಕ್ಕೆಲ್ಲ ತಾವು ಹೆದರುವುದಿಲ್ಲ ಎಂದರು.

ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ತಮಗೆ ಅರ್ಪಿಸಲಾದ ಧೀಮಂತ ಧುರೀಣ' ಅಭಿನಂದನಾ ಗ್ರಂಥದ ಬಿಡುಗಡೆ ಸಮಾರಂಭದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು. ಸುಖದೇವ ಥೋರತ್ ಮತ್ತು ಚೇತನ್ ಶಿಂಧೆ ಇಂಗ್ಲಿಷ್‌ನಲ್ಲಿ ರಚಿಸಿರುವ ಈ ಗ್ರಂಥವನ್ನು ಪ್ರೊ. ಆರ್.ಕೆ. ಹುಡಗಿ ಅವರು ಕನ್ನಡಕ್ಕೆ ಅನುವಾದಿಸಿರುವ ಕೃತಿಯೇಧೀಮಂತ ಧುರೀಣ’.

`ಮೋದಿ, ಅಮಿತ್ ಶಾ ಏನೇ ಮಾಡಿದರೂ ನಾನು ನನ್ನದನ್ನು ಬಿಡೋದಿಲ್ಲ. ನನ್ನದು ಅಂಬೇಡ್ಕರ್ ತತ್ವ-ಸಿದ್ಧಾಂತ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವಂಥ ನೆಹರು ಪ್ರತಿಪಾದಿತ ವೈಜ್ಞಾನಿಕ ಆಧಾರಿತ ಸಮಾಜವಾದಿ, ಜಾತ್ಯತೀತ ತತ್ವ. ಯಾರು ಬೊಬ್ಬೆ ಹೊಡೆದ್ರೂ ಅದರಿಂದ ಹಿಂದೆ ಸರಿಯುವುದಿಲ್ಲ’ ಎಂದು ಖರ್ಗೆ ಗುಡುಗಿದರು.

ದಲಿತ ನಾಯಕನೆನ್ನಬೇಡಿ: ನನ್ನನ್ನು ದಲಿತ ನಾಯಕನೆಂದು ಕರೆಯಬೇಡಿ. ನಾನು ಕಾಂಗ್ರೆಸ್ ನಾಯಕ. ನನಗ್ಯಾಕೆ ಗಂಟುಬಿದ್ದಿದೀರಿ? ಎಂದು ಖಾರವಾಗಿ ಪ್ರಶ್ನಿಸಿದ ಖರ್ಗೆ ಅವರು, ಯಾರನ್ನೂ ಜಾತಿಯಿಂದ ಗುರುತಿಸಬಾರದು, ಯಾರು ಬಡವರಿದ್ದಾರೋ?, ಒಂದು ಹೊತ್ತು ಉಣ್ಣಲು ಸಹ ಇಲ್ಲದ ನಿರ್ಗತಿಕರಿದ್ದಾರೋ ಅವರು ಯಾವುದೇ ಜಾತಿಯವರಾಗಿದ್ದರೂ ದಲಿತರೇ ಎಂದರು.