ದಿನಕ್ಕೊಂದು ಮೃತದೇಹ ಪತ್ತೆಯಾದ ಶೋಧ ಕಾರ್ಯಾಚರಣೆ; ನಾಕಲ್ ಮಂಟಪದ ಬಳಿ 3ನೇ ಮೃತದೇಹ ಪತ್ತೆ
ಸಂಕ ಸಮಾಚಾರ ತಂಬ್ರಹಳ್ಳಿ. (ವಿಜಯನಗರ) : ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಸಮೀಪದ ತುಂಗಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ಮೂವರು ಯುವಕರ ಮೃತದೇಹಗಳು ಮೂರು ದಿನಗಳ ನಿರಂತರ ಶೋಧ ಕಾರ್ಯಾಚರಣೆಯ ನಂತರ ಪತ್ತೆಯಾಗಿವೆ.
ಮೀನು ಹಿಡಿಯಲು ತೆರಳಿದ್ದ ಮೂವರು ಯುವಕರು ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ತಂಡ ಹಾಗೂ ಮುಳುಗು ತಜ್ಞರು ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು.
ವಿಶೇಷವೆಂದರೆ, ಶೋಧ ಕಾರ್ಯಾಚರಣೆ ಆರಂಭವಾದ ದಿನದಿಂದ ಪ್ರತಿದಿನ ಒಬ್ಬೊಬ್ಬರ ಮೃತದೇಹ ಪತ್ತೆಯಾಗಿದೆ. ಮೊದಲ ದಿನ ಯುವಕ ಯಮನೂರು ಅವರ ಮೃತದೇಹ ಘಟನೆ ನಡೆದ ಸ್ಥಳದಲ್ಲಿಯೇ ಪತ್ತೆಯಾಗಿತ್ತು. ಎರಡನೇ ದಿನ ಅಜ್ಜಪ್ಪ ಅವರ ಮೃತದೇಹ ಪತ್ತೆಯಾಗಿತ್ತು. ಮೂರನೇ ದಿನ ರಾಜು ಅವರ ಮೃತದೇಹ ಪತ್ತೆಯಾಗುವ ಮೂಲಕ ಮೂರು ದಿನಗಳ ಶೋಧ ಕಾರ್ಯಾಚರಣೆಗೆ ಅಂತ್ಯ ಕಂಡಿದೆ.
ಮೂರನೇ ಯುವಕ ರಾಜು ಅವರ ಮೃತದೇಹವು ಘಟನೆ ನಡೆದ ಸ್ಥಳದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಇತಿಹಾಸ ಪ್ರಸಿದ್ಧ ಬಂಡೇ ರಂಗನಾಥಸ್ವಾಮಿ ಬೆಟ್ಟದ ಸಮೀಪದ ನಾಕಲ್ ಮಂಟಪದ ಬಳಿ ಪತ್ತೆಯಾಗಿದೆ. ತುಂಗಭದ್ರಾ ಹಿನ್ನೀರಿನಲ್ಲಿ ನೀರಿನ ಹರಿವು ಹಾಗೂ ಆಳವಾದ ಪ್ರದೇಶಗಳ ನಡುವೆ ನಿರಂತರವಾಗಿ ಶೋಧ ನಡೆಸಿದ ತಂಡಕ್ಕೆ ಕೊನೆಗೂ ಮೂರನೇ ದಿನ ರಾಜು ಅವರ ಮೃತದೇಹ ಪತ್ತೆಯಾಗಿದೆ.
ಮೂರು ದಿನಗಳ ಕಾಲ ತಮ್ಮ ಕುಟುಂಬ ಸದಸ್ಯರು ಜೀವಂತವಾಗಿ ಮರಳಬಹುದೆಂಬ ನಿರೀಕ್ಷೆಯಲ್ಲಿದ್ದ ಕುಟುಂಬಸ್ಥರಿಗೆ ಕೊನೆಗೂ ಮೃತದೇಹಗಳು ಪತ್ತೆಯಾಗಿರುವುದು ತೀವ್ರ ದುಃಖವನ್ನುಂಟು ಮಾಡಿದೆ. ಮೂವರು ಯುವಕರನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟುವಂತಾಗಿತ್ತು.
ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗುಲಬರ್ಗಾದ ಎನ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ ಮಲ್ಪೆಯ ಈಶ್ವರ್ ಮುಳುಗು ತಜ್ಞರ ತಂಡ ನಿರಂತರವಾಗಿ ನಡೆಸಿದ ಶೋಧ ಕಾರ್ಯಾಚರಣೆಯಿಂದ ಮೂವರ ಮೃತದೇಹಗಳು ಪತ್ತೆಯಾಗಿದ್ದು,ಇವರ ನಿರಂತರ ಪ್ರಯತ್ನದ ಶೋಧ ಕಾರ್ಯಾಚರಣೆಗೆ ತಂಬ್ರಹಳ್ಳಿಯ ಸ್ಥಳೀಯ ಪೋಲಿಸ್ ಇಲಾಖೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿ ಸನ್ಮಾನ ಹಾಗೂ ಕಿರು ಧನ ಸಹಾಯ ಮಾಡುವ ಮೂಲಕ ಬೀಳ್ಕೊಟ್ಟರು ಮುಂದಿನ ಕಾನೂನು ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ.






















