ದಾವಣಗೆರೆ: ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕೈದಾಳೆ–ಕುಕ್ಕುವಾಡ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಕರೆಕಟ್ಟೆ ಗ್ರಾಮದ ಯೂಸುಫ್ ಖಾನ್ (33) ಹಾಗೂ ಹೊಸ ಬೆಳವನೂರು ಗ್ರಾಮದ ಅಣ್ಣಪ್ಪ (43) ಎಂದು ಗುರುತಿಸಲಾಗಿದೆ. ಯೂಸುಫ್ ಖಾನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಒಂದೂವರೆ ತಿಂಗಳ ಮಗುವಿಗೆ ದಾವಣಗೆರೆಯಲ್ಲಿ ಔಷಧಿ ಪಡೆದುಕೊಂಡು ಸ್ವಗ್ರಾಮಕ್ಕೆ ಮರಳುತ್ತಿದ್ದರು. ಈ ವೇಳೆ ಚನ್ನಗಿರಿ ಕಡೆಯಿಂದ ದಾವಣಗೆರೆ ಕಡೆಗೆ ಬರುತ್ತಿದ್ದ ಅಣ್ಣಪ್ಪ ಅವರ ಬೈಕ್ ಎದುರಿನಿಂದ ವೇಗವಾಗಿ ಬಂದು ಯೂಸುಫ್ ಖಾನ್ ಅವರ ಬೈಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ಗಳಲ್ಲಿ ಹಿಂಬದಿ ಸವಾರರಾಗಿದ್ದ ಸೈಯದ್ ರೋಷನ್ ಹಾಗೂ ಹನುಮಂತ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.






















