SK Home Ad
Home ಸುದ್ದಿ ದೇಶ ಸಣ್ಣ ಕನಸುಗಳು ಸಾಕಾಗುವುದಿಲ್ಲ, ದೊಡ್ಡ ಗುರಿ ಇರಲಿ: ಪ್ರಧಾನಿ

ಸಣ್ಣ ಕನಸುಗಳು ಸಾಕಾಗುವುದಿಲ್ಲ, ದೊಡ್ಡ ಗುರಿ ಇರಲಿ: ಪ್ರಧಾನಿ

0
70

ನವದೆಹಲಿ: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಗುರಿ ಸಾಧಿಸಲು ದೇಶದ ಜನರು ದೊಡ್ಡ ಕನಸುಗಳನ್ನು ಕಾಣಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಕೋಟೆಗೋಡೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಸಣ್ಣ ಕನಸುಗಳಿಂದ ದೇಶದ ದೊಡ್ಡ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.

‘ವಿಕಸಿತ ಭಾರತ’ದ ಕನಸು ನನಸಾಗಲು ಪ್ರತಿಯೊಬ್ಬ ಭಾರತೀಯನ ಕೊಡುಗೆ ಅಗತ್ಯ. 140 ಕೋಟಿ ಭಾರತೀಯರ ಸಾಮರ್ಥ್ಯ ಮತ್ತು ಶಕ್ತಿಯಿಂದ ದೇಶವು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯ ಹೊಸ ಎತ್ತರಗಳನ್ನು ತಲುಪುತ್ತಿದೆ. ಬಡವರು, ದಲಿತರು, ಶೋಷಿತರು, ಮಧ್ಯಮ ವರ್ಗ, ಯುವಕರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರ ಪ್ರಯತ್ನವನ್ನು ಪ್ರಧಾನಿ ಶ್ಲಾಘಿಸಿದರು.

ದೃಢ ಸಂಕಲ್ಪವಿದ್ದರೆ ಯಾವುದೇ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸಿ ಪರಿಹಾರದ ಮಾರ್ಗ ಕಂಡುಕೊಳ್ಳಬಹುದು. ದೊಡ್ಡ ಕನಸು ಕಾಣುವುದು ಮತ್ತು ಅದನ್ನು ಸಾಧಿಸುವ ಧೈರ್ಯವೇ ನವಭಾರತದ ಹೆಗ್ಗುರುತು ಎಂದು ಮೋದಿ ಹೇಳಿದರು.

ಆತ್ಮನಿರ್ಭರ ಭಾರತದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, ಭಾರತ ಇತರ ರಾಷ್ಟ್ರಗಳ ಮೇಲೆ ಅವಲಂಬಿತವಾಗಿರಬಾರದು. ದೇಶದ ಅಗತ್ಯಗಳನ್ನು ಸಾಧ್ಯವಾದಷ್ಟು ದೇಶೀಯವಾಗಿ ಪೂರೈಸುವ ನಿಟ್ಟಿನಲ್ಲಿ ಸ್ವದೇಶಿ ಉತ್ಪನ್ನಗಳು, ಆತ್ಮನಿರ್ಭರತೆ ಹಾಗೂ ‘ವೋಕಲ್ ಫಾರ್ ಲೋಕಲ್’ ಸಂಕಲ್ಪವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿ ಅವರಿಗೆ ಪುಷ್ಪ ನಮನ ಸಲ್ಲಿಸಿದ ಮೋದಿ, ಬಳಿಕ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸೇನಾ ಬ್ಯಾಂಡ್‌ ‘ವಂದೇ ಮಾತರಂ’ ಧುನಿಯನ್ನು ನುಡಿಸಿತು. ಭಾರತೀಯ ವಾಯುಪಡೆಯ ಎರಡು Mi-17 ಹೆಲಿಕಾಪ್ಟರ್‌ಗಳು ಪುಷ್ಪದಳಗಳ ಮಳೆಗರೆದವು.