ದಾವಣಗೆರೆ: ಕರ್ತವ್ಯದ ನಡುವೆ ಚಳಿಯಲ್ಲಿ ನಡುಗುತ್ತಾ ರಸ್ತೆ ಬದಿಯಲ್ಲಿ ಮಲಗಿದ್ದ ವಯೋವೃದ್ಧೆಯನ್ನು ಗಮನಿಸಿದ ಬಸವನಗರ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ.
ದಾವಣಗೆರೆ ನಗರದ ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಸಂತ ರಸ್ತೆಯಲ್ಲಿ ಬೆಳಗಿನ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಂಜುನಾಥ ಅವರಿಗೆ, ಸೊಳ್ಳೆ ಕಾಟದಿಂದ ಬಳಲುತ್ತಾ ರಸ್ತೆ ಬದಿಯ ಅಂಗಡಿಯ ಕೆಳಗೆ ಕುಳಿತಿದ್ದ ವಯೋವೃದ್ಧೆ ಕಾಣಿಸಿಕೊಂಡಿದ್ದಾರೆ.
ಚಳಿಯಲ್ಲಿ ಯಾವುದೇ ಆಸರೆಯಿಲ್ಲದೆ ಮಲಗಿದ್ದ ಹಿರಿಯ ಜೀವದ ಪರಿಸ್ಥಿತಿಯನ್ನು ಗಮನಿಸಿದ ಮಂಜುನಾಥ ಅವರು ತಕ್ಷಣ ಸ್ಪಂದಿಸಿ, ವಯೋವೃದ್ಧೆಗೆ ಸೊಳ್ಳೆ ಪರದೆ, ಹಾಸಿಗೆ ಹಾಗೂ ಹೊದಿಕೆ ಒದಗಿಸಿದ್ದಾರೆ. ಆ ಮೂಲಕ ಕರ್ತವ್ಯದ ಜತೆಗೆ ಮಾನವೀಯ ಕಾಳಜಿಯನ್ನೂ ಮೆರೆದಿದ್ದಾರೆ.
ನೊಂದ ಹಿರಿಯ ಜೀವಕ್ಕೆ ಆಸರೆಯಾಗಿ ನೆರವಾದ ಪೊಲೀಸ್ ಸಿಬ್ಬಂದಿ ಮಂಜುನಾಥ ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ. ಶೇಖರ್ ಹಾಗೂ ಬಸವನಗರ ಪೊಲೀಸ್ ಠಾಣಾಧಿಕಾರಿ ನಂಜುಂಡಸ್ವಾಮಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸಿಸಿದ್ದಾರೆ.
ಪೊಲೀಸರು ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲದೆ, ಸಂಕಷ್ಟದಲ್ಲಿರುವ ಜನರ ನೋವಿಗೆ ಸ್ಪಂದಿಸುವ ಮೂಲಕ ಮಾನವೀಯ ಮೌಲ್ಯಗಳನ್ನೂ ಎತ್ತಿಹಿಡಿಯಬೇಕು ಎಂಬುದಕ್ಕೆ ಈ ಘಟನೆ ಉತ್ತಮ ನಿದರ್ಶನವಾಗಿದೆ.





















