SK Home Ad
Home ನಮ್ಮ ಜಿಲ್ಲೆ ಗದಗ ಬಿತ್ತನೆ ಮಾಡದ ರೈತರಿಗೂ ಪರಿಹಾರಕ್ಕೆ ಚಿಂತನೆ

ಬಿತ್ತನೆ ಮಾಡದ ರೈತರಿಗೂ ಪರಿಹಾರಕ್ಕೆ ಚಿಂತನೆ

0
97

ಗದಗ: ಬೆಳೆ ವಿಮೆ ಕಂತು ಪಾವತಿಸಿರುವ ರೈತರು ಸೇರಿದಂತೆ ಬಿತ್ತನೆ ಮಾಡಲು ಸಾಧ್ಯವಾಗದ ರೈತರಿಗೂ ಪರಿಹಾರ ನೀಡಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಮಳೆ ಕೊರತೆಯಿಂದಾಗಿ ಸುಮಾರು ಶೇ. 10ರಷ್ಟು ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಬಿತ್ತನೆಯಾಗದ ಪ್ರದೇಶದ ರೈತರಿಗೆ ಯಾವ ರೀತಿಯಲ್ಲಿ ಪರಿಹಾರ ನೀಡಬಹುದು ಎಂಬುದರ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಈ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದೆಂದು ಅವರು ಶನಿವಾರ ಶಿರಹಟ್ಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಹೇಳಿದರು.

ಬರ ಘೋಷಣೆಗೆ ಸಕಾಲ ಅಲ್ಲ: ತಕ್ಷಣವೇ ಬರ ಘೋಷಣೆ ಮಾಡಲು ಸಾಧ್ಯವಿಲ್ಲ. ಬರ ಘೋಷಣೆಗೆ ಇನ್ನೂ ಸುಮಾರು 15 ದಿನಗಳ ಕಾಲಾವಕಾಶ ಬೇಕಾಗುತ್ತದೆಯೆಂದು ಹೇಳಿದರು. ರಾಜ್ಯದ 171 ತಾಲ್ಲೂಕುಗಳಲ್ಲಿ ಮಳೆಯ ಕೊರತೆ ಕಂಡುಬಂದಿದೆ. ಮಳೆ ಪ್ರಮಾಣ, ಬೆಳೆ ಪರಿಸ್ಥಿತಿ, ಬಿತ್ತನೆ ಪ್ರಮಾಣ, ಬೆಳೆ ಹಾನಿ ಸೇರಿದಂತೆ ವಿವಿಧ ಅಂಶಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿದ ಬಳಿಕ ಬರ ಘೋಷಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಸರ್ಕಾರ ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸುತ್ತಿದೆ. ಅಗತ್ಯವಿರುವ ಕಡೆಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಸವರಾಜ ರಾಯರಡ್ಡಿ ಭರವಸೆ ನೀಡಿದರು.