ದಾವಣಗೆರೆ: ಪೌರಕಾರ್ಮಿಕರ ಮಗನಿಗೆ ಸಚಿವ ಸ್ಥಾನ ನೀಡಿ ಗೌರವಿಸಿರುವುದು ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಸಾಕ್ಷಿಯಾಗಿದೆ ಎಂದು ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.
ತಾಲೂಕಿನ ಆನಗೋಡು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ಕನಸಿನಂತೆ ಯುವಕರಿಗೆ ಹಾಗೂ ಸಾಮಾನ್ಯ ಕುಟುಂಬದ ಹಿನ್ನೆಲೆಯುಳ್ಳವರಿಗೆ ಅವಕಾಶ ಸಿಕ್ಕಿರುವುದು ಕ್ಷೇತ್ರದ ಜನತೆ ನೀಡಿದ ಆಶೀರ್ವಾದದಿಂದಲೇ ಸಾಧ್ಯವಾಗಿದೆ. ಮುಖ್ಯಮಂತ್ರಿಗಳು ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯದ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಸಚಿವರಾದ ಮೇಲೆ ಪ್ರಥಮ ಬಾರಿಗೆ ನನ್ನ ಕ್ಷೇತ್ರಕ್ಕೆ ಆಗಮಿಸಿ, ಮತದಾರರ ಹಾಗೂ ಕ್ಷೇತ್ರದ ಜನರ ಆಶೀರ್ವಾದ ಪಡೆದಿದ್ದೇನೆ. ಕ್ಷೇತ್ರದಲ್ಲಿ ಮಳೆಯಿಂದ ಆಗಿರುವ ಬೆಳೆ ಹಾನಿ ಹಾಗೂ ರೈತರ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ, ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವ ಜವಾಬ್ದಾರಿಯನ್ನು ನಮಗೆ ವಹಿಸಿದ್ದಾರೆ. ಶೀಘ್ರದಲ್ಲೇ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡು, ರೈತರಿಗೆ ಸೂಕ್ತ ಪರಿಹಾರ ಸಿಗುವಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಚಿವ ಸ್ಥಾನ ಆಕಾಂಕ್ಷಿಗಳಾಗಿದ ಶಾಸಕರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾಧಾನ ಪಡಿಸುತ್ತಿದ್ದಾರೆ. ಸಚಿವರಾಗಬೇಕೆಂದು ಪ್ರತಿಯೊಬ್ಬ ಶಾಸಕರಿಗೂ ಆಸೆ ಇರುತ್ತದೆ. ಆದರೆ ನಮ್ಮ ವರಿಷ್ಠರು ಸಾಮಾಜಿಕ ನ್ಯಾಯ ಹಾಗೂ ಜಾತಿವಾರು ಸಚಿವ ಸ್ಥಾನ ನೀಡಿದ್ದಾರೆ. ಈ ಆಧರಿಸಿ ನನಗೆ ಅವಕಾಶ ಸಿಕ್ಕಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
22 ಕೆರೆ ತುಂಬಿಸುವ ಯೋಜನೆಗೆ ಮೊದಲ ಆದ್ಯತೆ: ಕ್ಷೇತ್ರದ ದೀರ್ಘಕಾಲದ ಬೇಡಿಕೆಯಾದ 22 ಕೆರೆ ತುಂಬಿಸುವ ಯೋಜನೆಯ ಕುರಿತು ಮಾತನಾಡಿದ ಅವರು, 22 ಕೆರೆ ತುಂಬಿಸುವ ಯೋಜನೆ ಅಂತಿಮ ಹಂತಕ್ಕೆ ಬಂದಿದ್ದು, ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ಹಿಂದೆ ಕಳಪೆ ಕಾಮಗಾರಿಯಿಂದಾಗಿ ಪೈಪ್‌ಲೈನ್ ಹಾಳಾಗಿ ಕೋಟ್ಯಂತರ ರೂಪಾಯಿ ವ್ಯರ್ಥವಾಗಿತ್ತು. ಶೀಘ್ರದಲ್ಲೇ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಈ ಯೋಜನೆಯನ್ನು ಪೂರ್ಣಗೊಳಿಸಿ, ಕ್ಷೇತ್ರದ ಕುಡಿಯುವ ನೀರು ಹಾಗೂ ನೀರಾವರಿ ಸಮಸ್ಯೆಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ನಾನು ಸೇರಿ ಶೀಘ್ರವೇ ಮುಕ್ತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಆಸ್ಪತ್ರೆಗಳ ಮೇಲ್ದರ್ಜೆಗೆ ಕ್ರಮ: ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ಹಾಗೂ ಅತ್ಯಾಧುನಿಕ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಶ್ರಮಿಸುವುದಾಗಿ ಸಚಿವರು ಭರವಸೆ ನೀಡಿದರು. ಕ್ಷೇತ್ರದ ಹಿರಿಯ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಸಾಹೇಬರು ಹಾಗೂ ಇತರ ಮುಖಂಡರ ಮಾರ್ಗದರ್ಶನದಲ್ಲಿ ದಾವಣಗೆರೆ ಜಿಲ್ಲೆ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.






















