SK Home Ad
Home ಕ್ರೀಡೆ ಫುಟ್‌ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರ ಸಾವು

ಫುಟ್‌ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರ ಸಾವು

0
185

ನವದೆಹಲಿ: ಫುಟ್‌ಬಾಲ್ ಪಂದ್ಯ ಆಡುತ್ತಿರುವ ವೇಳೆ ಏಕಾಏಕಿ ಸಿಡಿಲು ಬಡಿದು ಆಟಗಾರನೊಬ್ಬ ಮೈದಾನದಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ದಕ್ಷಿಣ ಥೈಲ್ಯಾಂಡ್‌ನಲ್ಲಿ ನಡೆದಿದೆ.

24 ವರ್ಷದ ಥಾಯ್ ಫುಟ್‌ಬಾಲ್ ಆಟಗಾರ ಸೋಫ್ವಾನ್ ಅವಾಯ್ ಮೃತಪಟ್ಟಿರುವ ವ್ಯಕ್ತಿ. ಈ ಘಟನೆಯ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಘಾತಕ್ಕೆ ಕಾರಣವಾಗಿವೆ.

ಮಳೆಯ ನಡುವೆಯೇ ಪಂದ್ಯ ಮುಂದುವರಿದಿದ್ದ ವೇಳೆ ಇದ್ದಕ್ಕಿದ್ದಂತೆ ಮೈದಾನಕ್ಕೆ ಸಿಡಿಲು ಬಡಿದಿದೆ. ಸಿಡಿಲಿನ ಪ್ರಭಾವದಿಂದ ಮೈದಾನದಲ್ಲಿ ಭಾರೀ ಸದ್ದು ಕೇಳಿಬಂದಿದ್ದು, ಆಟಗಾರರು ಆತಂಕದಿಂದ ಚದುರಿ ಓಡಿದ್ದಾರೆ. ಈ ವೇಳೆ ಸಿಡಿಲಿನ ಹೊಡೆತಕ್ಕೆ ಸಿಲುಕಿದ ಸೋಫ್ವಾನ್ ಅವಾಯ್ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಗಂಭೀರ ಗಾಯಗಳಾಗಿದ್ದ ಕಾರಣ ಅವಾಯ್ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಇನ್ನೂ 12 ಆಟಗಾರರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಈ ದುರ್ಘಟನೆ ಗೋಲೋಕ್ ಎಫ್‌ಎ ಕಪ್ ಸ್ಥಳೀಯ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ನಡೆದಿದೆ. ಸ್ಯಾಮ್‌ಕೋಲ್ಟ್ಸ್ ಹಾಗೂ ಅಬು ಎಕ್ಸ್ ನಾಂಗ್ ಸಿರಿನ್ ತಂಡಗಳ ನಡುವಿನ ಪಂದ್ಯ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸಾವಿರಾರು ಮಂದಿ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ, ಮಳೆಯ ನಡುವೆ ಮತ್ತು ಸಿಡಿಲಿನ ಅಪಾಯವಿದ್ದರೂ ಪಂದ್ಯವನ್ನು ಮುಂದುವರಿಸಲು ಅವಕಾಶ ನೀಡಿದ ಆಯೋಜಕರ ನಿರ್ಧಾರವನ್ನು ಅನೇಕರು ಪ್ರಶ್ನಿಸಿದ್ದಾರೆ.