SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಬ್ಲಾಕ್‌ಮೇಲ್ ತಂತ್ರ ನಡೆದಿಲ್ಲ

ಸಚಿವ ಸಂಪುಟ ವಿಸ್ತರಣೆಯಲ್ಲಿ ಬ್ಲಾಕ್‌ಮೇಲ್ ತಂತ್ರ ನಡೆದಿಲ್ಲ

0
89

ದಾವಣಗೆರೆ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕುರಿತು ಕೇಳಿಬರುತ್ತಿರುವ ಬ್ಲಾಕ್‌ಮೇಲ್ ಆರೋಪಗಳನ್ನು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ತಳ್ಳಿ ಹಾಕಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತರೆಂಬ ತಾರತಮ್ಯ ಮಾಡಲಾಗಿದೆ ಎಂಬ ಪ್ರಶ್ನೆಗೆ, ಕಾಂಗ್ರೆಸ್‌ನಲ್ಲಿ ಯಾರೂ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಅವರ ಪ್ರತ್ಯೇಕ ಆಪ್ತರಲ್ಲ, ಪ್ರತಿಯೊಬ್ಬ ಶಾಸಕರು ಮತ್ತು ಸಚಿವರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು ಎಂದರು.

ಕ್ಲರಿಕಲ್ ಮಿಸ್ಟೇಕ್‌ನಿಂದ ಗೊಂದಲ: ಇನ್ನು ಸಚಿವ ಸ್ಥಾನ ಹಂಚಿಕೆಯ ಪಟ್ಟಿಯಲ್ಲಿ ಕಂಡುಬಂದ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಟ್ಟಿಯಲ್ಲಿ ಕಂಡುಬಂದ ಸಣ್ಣ ವ್ಯತ್ಯಾಸಗಳು ಕೇವಲ ʻಕ್ಲರಿಕಲ್ ಮಿಸ್ಟೇಕ್ʼ (ಲಿಪಿಕ ದೋಷ) ನಿಂದಾಗಿರಬಹುದು. ಆಡಳಿತದಲ್ಲಿ ಪ್ರಾದೇಶಿಕ ಮತ್ತು ಸಮುದಾಯಗಳ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಹಿಂದುಳಿದ ವರ್ಗಗಳು, ಎಡಗೈ ಮತ್ತು ಬಲಗೈ ಸಮುದಾಯಗಳು ಹಾಗೂ ಸಾಧು ಲಿಂಗಾಯತ ಮುಂತಾದ ಸಮಾಜಗಳ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.

ಬ್ಲಾಕ್‌ಮೇಲ್ ಆರೋಪ ನಿರಾಕರಣೆ: ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಇತರ ನಾಯಕರು ಸಚಿವ ಸ್ಥಾನ ಪಡೆಯಲು ಬ್ಲಾಕ್‌ಮೇಲ್ ತಂತ್ರ ಬಳಸಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿ, ಯಾವುದೇ ಶಾಸಕರು ಅಥವಾ ನಾಯಕರು ರಾಜೀನಾಮೆ ಬೆದರಿಕೆ ಹಾಕಿಲ್ಲ ಅಥವಾ ಬ್ಲಾಕ್‌ಮೇಲ್ ಮಾಡಿಲ್ಲ. ಎಲ್ಲ ಶಾಸಕರು ಒಗ್ಗಟ್ಟಾಗಿದ್ದು, ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳ ತೀರ್ಮಾನಕ್ಕೆ ಬದ್ಧರಾಗಿದ್ದಾರೆ ಎಂದು ತಿಳಿಸಿದರು.