ನವದೆಹಲಿ: ಥಾಯ್ಲೆಂಡ್‌ನ ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ AI2379 ವಿಮಾನವು ಮಂಗಳವಾರ ತೀವ್ರ ಗಾಳಿಯ ಪ್ರಕ್ಷುಬ್ಧತೆ (Turbulence)ಗೆ ಸಿಲುಕಿದ ಪರಿಣಾಮ ಪ್ರಯಾಣಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಘಟನೆಯಲ್ಲಿ ಸುಮಾರು 10 ಮಂದಿ ಪ್ರಯಾಣಿಕರು ಹಾಗೂ ಕೆಲವು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿಮಾನವು ಸುರಕ್ಷಿತವಾಗಿ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ.
134 ಪ್ರಯಾಣಿಕರಿದ್ದ ಏರ್‌ಬಸ್ A320 : ಏರ್ ಇಂಡಿಯಾದ ಏರ್‌ಬಸ್ A320 (AI2379) ವಿಮಾನದಲ್ಲಿ ಒಟ್ಟು 134 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ದೆಹಲಿಗೆ ಆಗಮಿಸುವ ವೇಳೆ ವಿಮಾನವು ಹಠಾತ್ ಪ್ರಬಲ ಟರ್ಬುಲೆನ್ಸ್‌ಗೆ ಸಿಲುಕಿದ್ದು, ಕೆಲವೇ ಕ್ಷಣಗಳಲ್ಲಿ ಸುಮಾರು 250ರಿಂದ 300 ಅಡಿ ಎತ್ತರದವರೆಗೆ ಕುಸಿದಿರುವುದಾಗಿ ವರದಿಯಾಗಿದೆ.
ಈ ಆಘಾತದಿಂದ ವಿಮಾನದ ಒಳಭಾಗದಲ್ಲಿ ಕುಳಿತಿದ್ದ ಕೆಲ ಪ್ರಯಾಣಿಕರು ಹಾಗೂ ಕರ್ತವ್ಯದಲ್ಲಿದ್ದ ಕ್ಯಾಬಿನ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸುರಕ್ಷಿತವಾಗಿ ದೆಹಲಿಯಲ್ಲಿ ಲ್ಯಾಂಡ್ : ತೀವ್ರ ಪ್ರಕ್ಷುಬ್ಧತೆಯ ನಡುವೆಯೂ ಪೈಲಟ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದು, ವಿಮಾನವು ಬೆಳಿಗ್ಗೆ ಸುಮಾರು 11 ಗಂಟೆಗೆ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ವಿಮಾನ ಇಳಿದ ತಕ್ಷಣ ವಿಮಾನ ನಿಲ್ದಾಣದಲ್ಲೇ ವೈದ್ಯಕೀಯ ತಂಡಗಳು ಸಿದ್ಧವಾಗಿದ್ದು, ಗಾಯಗೊಂಡ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಪರೀಕ್ಷಿಸಿ ಅಗತ್ಯ ಚಿಕಿತ್ಸೆ ನೀಡಲಾಯಿತು.
ಕ್ಯಾಬಿನ್ ಪ್ಯಾನೆಲ್‌ಗಳಿಗೆ ಹಾನಿ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕೆಲವು ಚಿತ್ರಗಳಲ್ಲಿ ವಿಮಾನದ ಒಳಭಾಗದಲ್ಲಿರುವ ಕ್ಯಾಬಿನ್ ಪ್ಯಾನೆಲ್‌ಗಳು ಬಿರುಕು ಬಿಟ್ಟಿರುವುದು ಹಾಗೂ ಕೆಲವು ಭಾಗಗಳು ಸಡಿಲಗೊಂಡಿರುವುದು ಕಂಡುಬಂದಿದೆ. ಟರ್ಬುಲೆನ್ಸ್‌ನ ತೀವ್ರತೆಯನ್ನು ಈ ದೃಶ್ಯಗಳು ಸೂಚಿಸುತ್ತಿವೆ.
ಏರ್ ಇಂಡಿಯಾದ ಸ್ಪಷ್ಟನೆ : ಘಟನೆ ಕುರಿತು ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ವಿಮಾನವು ಸುರಕ್ಷಿತವಾಗಿ ದೆಹಲಿಗೆ ತಲುಪಿದ್ದು, ಯಾವುದೇ ಗಂಭೀರ ಗಾಯಗಳು ಸಂಭವಿಸಿಲ್ಲ ಎಂದು ತಿಳಿಸಿದೆ. ಗಾಯಗೊಂಡ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗಿದೆ. ಜೊತೆಗೆ, ಘಟನೆಯ ಕುರಿತು ಸಂಬಂಧಿತ ವಾಯುಯಾನ ನಿಯಂತ್ರಣ ಮತ್ತು ತನಿಖಾ ಸಂಸ್ಥೆಗಳೊಂದಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.
ತನಿಖೆ ಆರಂಭ : ಘಟನೆಯ ಕುರಿತು ನಾಗರಿಕ ವಿಮಾನಯಾನ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಟರ್ಬುಲೆನ್ಸ್‌ನ ಸ್ವರೂಪ, ಹವಾಮಾನ ಪರಿಸ್ಥಿತಿ ಹಾಗೂ ವಿಮಾನದ ಕಾರ್ಯಾಚರಣೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಇದರ ನಡುವೆ ಕೆಲ ಪ್ರಯಾಣಿಕರು ಘಟನೆಯ ಕುರಿತು ಸ್ಪಷ್ಟನೆ ಹಾಗೂ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಟರ್ಬುಲೆನ್ಸ್ ಎಂದರೇನು? : ಟರ್ಬುಲೆನ್ಸ್ ಎನ್ನುವುದು ಗಾಳಿಯ ಒತ್ತಡ ಮತ್ತು ವೇಗದಲ್ಲಿ ಉಂಟಾಗುವ ಹಠಾತ್ ಬದಲಾವಣೆಯಿಂದ ವಿಮಾನದಲ್ಲಿ ಉಂಟಾಗುವ ಅಸ್ಥಿರ ಚಲನೆಯಾಗಿದೆ. ಸಾಮಾನ್ಯವಾಗಿ ಇದು ಕೆಲ ಕ್ಷಣಗಳ ಕಾಲ ಮಾತ್ರ ಮುಂದುವರಿಯುತ್ತದೆ. ಆದಾಗ್ಯೂ, ಪ್ರಯಾಣಿಕರು ಸುರಕ್ಷತಾ ಬೆಲ್ಟ್ ಧರಿಸದೇ ಇದ್ದರೆ ಗಾಯಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ.



















