ಬೆಂಗಳೂರು: ಕಾವೇರಿ ವಿಚಾರದಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಅವರಿಗೆ ಕಾನೂನು ಮೂಲಕ ಉತ್ತರ ನೀಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಅವರಿಗೆ ಕಾನೂನು ಮೂಲಕ ಉತ್ತರ ನೀಡಲಾಗುವುದು ಎಂದರು.
ಕಾವೇರಿ ವಿಚಾರದಲ್ಲಿ ತಮಿಳುನಾಡು ನ್ಯಾಯಾಲಯದ ಮೇಟ್ಟಿಲೇರಿದೆ ಎಂಬ ಮಾಹಿತಿ ಬಂದಿದೆ. ನಾನು ಅವರ ಹಕ್ಕನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ನಾನು ದೇಶದ ಕಾನೂನನ್ನು ಗೌರವಿಸಿದ್ದೇವೆ. ನಾವು ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯಬೇಕು ಎಂದು ತಕ್ಷಣವೇ ತೀರ್ಮಾನ ಮಾಡಲಿಲ್ಲ ಎಂದರು.
ನಮಗೆ ಬಿಜೆಪಿ ಹಾಗೂ ಜೆಡಿಎಸ್ ಸಹಕಾರ ನೀಡಿವೆ. ಈ ವಿಚಾರದಲ್ಲಿ ಇಡೀ ಕರ್ನಾಟಕ ಒಗ್ಗಟ್ಟಾಗಿ ನಿಂತಿದೆ. ಭವಿಷ್ಯದಲ್ಲೂ ಅವರು ನಮ್ಮ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಸಹಕಾರ ನೀಡಿರುವ ನಮ್ಮ ರಾಜ್ಯದ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಪ್ರಹ್ಲಾದ್ ಜೋಷಿ ಅವರು ಸಂಸದರ ನಿಯೋಗವನ್ನು ಕೇಂದ್ರ ಸಚಿವರ ಬಳಿಗೆ ಕೊಂಡೊಯ್ದಿದ್ದು ಮನವಿ ಮಾಡಿದ್ದಾರೆ ಎಂದರು.
ವರುಣ ದೇವರ ಕೃಪೆ ಕೂಡ ನಮ್ಮ ಮೇಲಿದೆ. ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಕಾನೂನು ಚೌಕಟ್ಟಿನಲ್ಲಿ ಪಾಲನೆ ಮಾಡುತ್ತಿದ್ದೇವೆ. ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರ 15 ದಿನಗಳಿಗೊಮ್ಮೆ ಸಭೆ ಮಾಡಲಿದ್ದು, ಪರಿಸ್ಥಿತಿ ಅನುಗುಣವಾಗಿ ತೀರ್ಮಾನ ಮಾಡಲಿವೆ. ನಾವು ಅವರಿಗೆ ಪರಿಸ್ಥಿತಿ ವಿವರಿಸುತ್ತೇವೆ ಎಂದು ತಿಳಿಸಿದರು.




















