ತಮಿಳು ನಟ ಅಜಿತ್ ಕುಮಾರ್ ಅವರ 64ನೇ ಸಿನಿಮಾ ‘ಡೇರ್‌ಡೆವಿಲ್’ ಎಂದು ಘೋಷಿಸಲಾಗಿದೆ. ‘ಗುಡ್ ಬ್ಯಾಡ್ ಅಗ್ಲಿ’ ಬಳಿಕ ನಿರ್ದೇಶಕ ಅಧಿಕ್ ರವಿಚಂದ್ರನ್ ಅವರೊಂದಿಗೆ ಮತ್ತೆ ಕೈಜೋಡಿಸಿರುವ ಅಜಿತ್ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ.
ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ಅವರ ಬಹುನಿರೀಕ್ಷಿತ 64ನೇ ಚಿತ್ರದ ಅಧಿಕೃತ ಘೋಷಣೆ ಹೊರಬಿದ್ದಿದ್ದು, ಚಿತ್ರಕ್ಕೆ ‘ಡೇರ್‌ಡೆವಿಲ್’ (DareDevil) ಎಂಬ ಶೀರ್ಷಿಕೆ ನಿಗದಿಯಾಗಿದೆ. ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಿರ್ದೇಶಕ ಅಧಿಕ್ ರವಿಚಂದ್ರನ್ ಮತ್ತು ಅಜಿತ್ ಕುಮಾರ್ ಮತ್ತೊಮ್ಮೆ ಒಂದಾಗಿರುವುದು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.
ಚಿತ್ರದ ಮೊದಲ ಪೋಸ್ಟರ್‌ನ್ನು ನಿರ್ದೇಶಕ ಅಧಿಕ್ ರವಿಚಂದ್ರನ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಅಜಿತ್ ಕುಮಾರ್ ಅವರ ಸಿನಿ ಜೀವನದ 34 ವರ್ಷಗಳನ್ನು ಸ್ಮರಿಸುತ್ತಾ, “ತಡೆಗಳನ್ನು ಮುರಿದು, ಲಕ್ಷಾಂತರ ಮಂದಿಗೆ ಸ್ಫೂರ್ತಿ ನೀಡಿದ ಅಜಿತ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ವಿಶೇಷ” ಎಂದು ಅವರು ಬರೆದುಕೊಂಡಿದ್ದಾರೆ.
ಈ ಚಿತ್ರವನ್ನು ಬ್ರೇವ್ ಹಾರ್ಟ್ಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶಾಲಿನಿ ಅಜಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಇದು ಅಜಿತ್ ಕುಟುಂಬದ ನಿರ್ಮಾಣ ಸಂಸ್ಥೆಯಡಿ ಮೂಡಿಬರುತ್ತಿರುವ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಸಂಗೀತ ನಿರ್ದೇಶಕರಾಗಿ ಅನಿರುದ್ಧ್ ರವಿಚಂದರ್ ಆಯ್ಕೆಯಾಗಿದ್ದು, ಇದು ಅಜಿತ್ ಅವರೊಂದಿಗೆ ಅವರ ನಾಲ್ಕನೇ ಸಿನಿಮಾ. ಈ ಹಿಂದೆ ವೇದಾಳಂ, ವಿವೇಗಂ ಹಾಗೂ ವಿದಾಮುಯರ್ಚಿ ಚಿತ್ರಗಳಿಗೆ ಅನಿರುದ್ಧ್ ಸಂಗೀತ ನೀಡಿದ್ದರು.
ತಾಂತ್ರಿಕ ಬಳಗವೂ ಗಮನ ಸೆಳೆಯುವಂತಿದೆ. ಛಾಯಾಗ್ರಹಣವನ್ನು ಅಭಿನಂದನ್ ರಾಮಾನುಜಂ, ಸಂಕಲನವನ್ನು ವಿಜಯ್ ವೆಲುಕುಟ್ಟಿ, ಸಾಹಸ ದೃಶ್ಯಗಳನ್ನು ಸುಪ್ರೀಂ ಸುಂದರ್, ವಸ್ತ್ರ ವಿನ್ಯಾಸವನ್ನು ಅನು ವರ್ಧನ್ ನಿರ್ವಹಿಸಲಿದ್ದಾರೆ.
ಚಿತ್ರದ ಕಥಾಹಂದರವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಬಿಡುಗಡೆಯಾದ ಮೊದಲ ಪೋಸ್ಟರ್‌ನಲ್ಲಿ ಕಾಣುವ ಡೈಸ್ (Dice) ವಿನ್ಯಾಸ ಚಿತ್ರದ ಕಥೆ ಜೂಜಾಟ ಅಥವಾ ಅಪಾಯಕಾರಿ ಸಾಹಸಗಳ ಸುತ್ತ ಹೆಣೆದಿರಬಹುದೆಂಬ ಊಹೆಗಳಿಗೆ ಕಾರಣವಾಗಿದೆ. ಚಿತ್ರತಂಡ ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಅಜಿತ್ ಕುಮಾರ್ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ರೇಸಿಂಗ್ ವೃತ್ತಿಜೀವನದಲ್ಲೂ ಸಕ್ರಿಯರಾಗಿದ್ದು, ಸಿನಿಮಾ ಘೋಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂತಹ ಸಂದರ್ಭದಲ್ಲಿ ‘ಡೇರ್‌ಡೆವಿಲ್’ ಘೋಷಣೆಯು ಅಭಿಮಾನಿಗಳಿಗೆ ಸಂತಸದ ಸುದ್ದಿ ತಂದಿದೆ. ಗುಡ್ ಬ್ಯಾಡ್ ಅಗ್ಲಿ ಯಶಸ್ಸಿನ ಬಳಿಕ ಇದೇ ತಂಡ ಮತ್ತೊಮ್ಮೆ ಒಂದಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಚಿತ್ರದ ಕಲಾವಿದರ ಸಂಪೂರ್ಣ ಪಟ್ಟಿ, ಚಿತ್ರೀಕರಣ ವೇಳಾಪಟ್ಟಿ ಹಾಗೂ ಬಿಡುಗಡೆಯ ದಿನಾಂಕವನ್ನು ನಿರ್ಮಾಪಕರು ಮುಂದಿನ ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ






















