ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಧ್ವನಿ ಜೋರಾಗಿದೆ. ಒಂದಡೆ ಸಂಜೆ 5 ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಿದ್ಧತೆ ಜೋರಾಗಿದ್ದರೆ, ಇನ್ನೊಂದಡೆ ಹಲವು ಹಿರಿಯ ಹಾಗೂ ಪ್ರಭಾವಿ ನಾಯಕರಿಗೆ ಸಚಿವ ಸ್ಥಾನ ಕೈತಪ್ಪಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯ ಗೌಡ ಪಾಟೀಲ್ ತಮಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶಾಸಕ ಯಶವಂತರಾಯ ಗೌಡ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ಪತ್ರದಲ್ಲಿ “ಕರ್ನಾಟಕ ವಿಧಾನಸಭೆಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು, ದಯವಿಟ್ಟು ಅಂಗೀಕರಿಸಬೇಕಾಗಿ ವಿನಂತಿಸುತ್ತೇನೆ” ಎಂದು ಬರೆಯಲಾಗಿದೆ.
ಸಚಿವ ಸಂಪುಟ ವಿಸ್ತರಣೆ ಬಳಿಕ ಪಕ್ಷದೊಳಗಿನ ಅಸಮಾಧಾನವನ್ನು ಶಮನಗೊಳಿಸುವುದು ಕಾಂಗ್ರೆಸ್ ನಾಯಕತ್ವದ ಮುಂದಿರುವ ದೊಡ್ಡ ಸವಾಲಾಗಿದ್ದು, ಈ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.






















