ಬೆಂಗಳೂರು: ಚನ್ನಮ್ಮ ದೇವೇಗೌಡ ಅವರ ಪುಣ್ಯಸ್ಮರಣೆ ಅಂಗವಾಗಿ ಬಾಬುಸಾಪಾಳ್ಯ ವಾರ್ಡ್ ನಂ. 4ರಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ “ಮಹಿಳೆಯರ ಉಳಿತಾಯ, ಸ್ಮಾರ್ಟ್ ಹೂಡಿಕೆ ಮತ್ತು ಆರ್ಥಿಕ ಸ್ವಾವಲಂಬನೆ” ಕುರಿತ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಚನ್ನಮ್ಮ ದೇವೇಗೌಡ ಅವರು ಸರಳತೆ, ಸೇವಾ ಮನೋಭಾವ ಮತ್ತು ಸಮಾಜಸೇವೆಗೆ ಹೆಸರುವಾಸಿಯಾಗಿದ್ದು, ಅವರ ಆದರ್ಶಗಳು ಹಾಗೂ ಜನಪರ ಮೌಲ್ಯಗಳನ್ನು ಸ್ಮರಿಸುವ ಉದ್ದೇಶದಿಂದ ಈ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾರ್ವಜನಿಕರ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿವಿಧ ಮಾಹಿತಿಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಬಾಬುಸಾಪಾಳ್ಯ ವಾರ್ಡ್ ನಂ. 4ರ ಆಕಾಂಕ್ಷಿ ದಿವ್ಯ ಶಿವಕುಮಾರ್ ಮಾತನಾಡಿ, “ಚನ್ನಮ್ಮ ದೇವೇಗೌಡ ಅವರ ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳು ಎಲ್ಲರಿಗೂ ಸದಾ ಪ್ರೇರಣೆಯಾಗಿವೆ. ಅವರ ಆದರ್ಶಗಳನ್ನು ಮುಂದುವರಿಸುವ ಉದ್ದೇಶದಿಂದ ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದ ಜನಪರ ಕಾರ್ಯಕ್ರಮಗಳನ್ನು ಮುಂದೆಯೂ ನಿರಂತರವಾಗಿ ಹಮ್ಮಿಕೊಳ್ಳಲಾಗುವುದು. ಜನಸೇವೆಯೇ ನಮ್ಮ ಬದ್ಧತೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು, ಮಹಿಳೆಯರು ಹಾಗೂ ಮುಖಂಡರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಕುರಿತು ತಜ್ಞರು ಮಾಹಿತಿ ನೀಡಿದ್ದು, ಉಳಿತಾಯ ಮತ್ತು ಹೂಡಿಕೆ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮವು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಪಡೆಯಿತು.




















