ಚಿತ್ರದುರ್ಗ: ಜಿಲ್ಲೆಯ ಚಿತ್ರದುರ್ಗ ತಾಲೂಕಿನ ದೊಡ್ಡಿಗನಾಳ್ ಗ್ರಾಮದ ಸಮೀಪದ ಜಮೀನಿನಲ್ಲಿ ಸುಮಾರು ಒಂದು ವರ್ಷದ ಪ್ರಾಯದ ಎರಡು ಚಿರತೆ ಮರಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ವನ್ಯಜೀವಿ ಸಂರಕ್ಷಣಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.
ಗುರುವಾರ ರಾತ್ರಿ ಮೆಕ್ಕೆಜೋಳ ಬೆಳೆದಿರುವ ಜಮೀನಿನಲ್ಲಿ ಒಂದು ಚಿರತೆ ಮರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮತ್ತೊಂದು ಸಮೀಪದ ಮರದ ಕೊಂಬೆಗಳ ನಡುವೆ ಸಾವನ್ನಪ್ಪಿರುವುದು ಕಂಡುಬಂದಿದೆ. ಎರಡೂ ಚಿರತೆ ಮರಿಗಳ ಸಾವಿಗೆ ಕೀಟನಾಶಕ ಮಿಶ್ರಿತ ನೀರು ಸೇವಿಸಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ದೊಡ್ಡಿಗನಾಳ್ ಗ್ರಾಮದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿ ಅರಣ್ಯ ಪ್ರದೇಶವಿದ್ದು, ಗ್ರಾಮ ಮತ್ತು ಅರಣ್ಯದ ಮಧ್ಯೆ ಹರಿಯುವ ಹಳ್ಳಕ್ಕೆ ಚಿರತೆಗಳು ಆಗಾಗ ನೀರು ಕುಡಿಯಲು ಬರುತ್ತಿದ್ದವು. ಸುತ್ತಮುತ್ತಲಿನ ಜಮೀನುಗಳಲ್ಲಿ ವ್ಯಾಪಕವಾಗಿ ಮೆಕ್ಕೆಜೋಳ ಬೆಳೆದಿರುವುದರಿಂದ ಕೀಟನಾಶಕ ಬಳಕೆಯ ಪರಿಣಾಮವಾಗಿ ನೀರು ವಿಷಪೂರಿತವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಮರಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯುವ ನಿರೀಕ್ಷೆಯಿದೆ.
ಈ ಕುರಿತು ಪ್ರತಿಕ್ರಿಯಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ, “ಸುಮಾರು ಒಂದು ವರ್ಷದ ಪ್ರಾಯದ ಎರಡು ಚಿರತೆ ಮರಿಗಳ ಸಾವಿನ ಸಂಬಂಧ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಲಾಗುವುದು. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ವನ್ಯಜೀವಿಗಳ ಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಕೀಟನಾಶಕಗಳ ಅತಿಯಾದ ಬಳಕೆ ಹಾಗೂ ಪರಿಸರ ಮಾಲಿನ್ಯದಿಂದ ಇಂತಹ ಘಟನೆಗಳು ಮರುಕಳಿಸದಂತೆ ರೈತರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಕೂಡ ಘಟನೆಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿಸಿದೆ.
- ಸಾಲದ ಸಂಕಷ್ಟಕ್ಕೆ ಬಲಿಯಾದ ರೈತ ದಂಪತಿ; ಮನೆಗೆ ಭೇಟಿ ನೀಡಿ ನೆರವಿನ ಭರವಸೆ ನೀಡಿದ ಕುಮಾರಸ್ವಾಮಿ
- ದಾಖಲೆ ಕಲೆಕ್ಷನ್ ಮೂಲಕ ‘ಸ್ಪೈಡರ್-ಮ್ಯಾನ್’ ವಿಶ್ವಾದ್ಯಂತ ಸದ್ದು
- 2027 ವಿಶ್ವಕಪ್ ಕ್ರಿಕೆಟ್ಗೆ ಆಫ್ರಿಕಾದ ಆತಿಥ್ಯ: 12 ಮೈದಾನಗಳ ಘೋಷಣೆ
- 19 ವರ್ಷ ಬಳಿಕ ಕೋಲ್ಕತ್ತಾಗೆ ಮರಳಿದ ಲೇಖಕಿ ತಸ್ಲಿಮಾ ನಸ್ರಿನ್!
- ಆಗಸ್ಟ್ 2ರ ಸರ್ವಪಕ್ಷ ಸಭೆಯಲ್ಲಿ ಕಾವೇರಿ ಕುರಿತು ಸ್ಪಷ್ಟ ನಿಲುವು






















