ಕಲಬುರಗಿ: ಅಫಜಲಪುರ ತಾಲೂಕಿನ ಕರಜಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೆಳಗಿನ ಉಪಹಾರ ಸೇವನೆ ಸಮಯದಲ್ಲಿ ಅವಲಕ್ಕಿ ಸೇವಿಸಿ 57 ವಸತಿ ಶಾಲೆ ಮಕ್ಕಳು ಅಸ್ವಸ್ಥರಾಗಿ ಅಫಜಲಪುರ ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ವಸತಿ ಶಾಲೆಯಲ್ಲಿ ಒಟ್ಟು 220 ವಿದ್ಯಾರ್ಥಿಗಳಿದ್ದು ಗುರುವಾರ ಬೆಳಿಗ್ಗೆ ಎಂದಿನಂತೆ ಉಪಹಾರ ಸೇವೆನೆ ಮಾಡಿದ ವಿದ್ಯಾರ್ಥಿಗಳು ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಸಿದ್ಧಪಡಿಸಿದ ಅವಲಕ್ಕಿ ಉಪಹಾರದ ಬದಲಾಗಿ ಬೇರೊಂದು ಅಡುಗೆ ಉಣಬಡಿಸಿದ್ದಾರೆ. ಆದರೂ ಅವಲಕ್ಕಿ ಸೇವಿಸಿದ ವಿದ್ಯಾರ್ಥಿಗಳು ತೀವ್ರ ಹೊಟ್ಟೆ ನೋವು ಹಾಗೂ ವಾಂತಿಯಿಂದ ಬಳಲುತ್ತಿದಂತೆ ಖಾಸಗಿ ವಾಹನಗಳ ಮೂಲಕ ಅಫಜಲಪುರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳಲ್ಲಿ 32 ಹುಡುಗರು, 23 ಹುಡುಗಿಯರು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ ಇಬ್ಬರು ಹುಡುಗರು ತೀವ್ರ ನೋವಿನಿಂದ ಬಳಲುತ್ತಿದ್ದರಿಂದ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆ ತಿಳಿಯುತ್ತಿದಂತೆ ತಹಶೀಲ್ದಾರ್ ಸಂಜೀವಕುಮಾರ ದಾಸರ್, ತಾಪಂ ಇಒ ಶಂಕರ ರಾಠೋಡ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾದ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆಗೆ ಮುಂದಾಗಿದ್ದಾರೆ. ನಂತರ ಜಿಲ್ಲಾ ಸಮಾಜ ಕಲ್ಯಾಣ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಮನಿ ಭೇಟಿ ನೀಡಿ ವಿದ್ಯಾರ್ಥಿಗಳ ಯೋಗ-ಕ್ಷೇಮ ವಿಚಾರಿಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಎಂ.ವೈ. ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ ಪ್ರತಿ ವಾರ್ಡ್ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಘಟನೆ ತಿಳಿಯುತ್ತಿದಂತೆ ವಿದ್ಯಾರ್ಥಿಗಳ ಪಾಲಕರು ಆಸ್ಪತ್ರೆಗೆ ದೌಡಾಯಿಸಿ ತಮ್ಮ ಮಕ್ಕಳ ಹುಡುಕಿ ಆರೋಗ್ಯ ವಿಚಾರಿಸಿದರು. ಕನ್ನಡ ಪರ ಸಂಘಟನೆಗಳು ನಿರ್ಲಕ್ಷ್ಯ ವಹಿಸಿದ ವಸತಿ ನಿಲಯದ ಎಲ್ಲ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳುವಂತೆ ರಾಜ್ಯ ಹೆದ್ದಾರಿ ತಡೆದು ಟೈಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.






















