SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಜೀರೋ ಟ್ರಾಫಿಕ್‌ನಲ್ಲಿ ಮೂರು ತಿಂಗಳ ಕಂದಮ್ಮನ ಜೀವದ ಓಟ!

ಜೀರೋ ಟ್ರಾಫಿಕ್‌ನಲ್ಲಿ ಮೂರು ತಿಂಗಳ ಕಂದಮ್ಮನ ಜೀವದ ಓಟ!

0
68

ದಾವಣಗೆರೆ: ಕೇವಲ ಮೂರು ತಿಂಗಳ ಹೆಣ್ಣು ಮಗು ಅನ್ವಿಕಾಳ ಜೀವ ಉಳಿಸಲು ಗುರುವಾರ ಸಂಜೆ ದಾವಣಗೆರೆ ನಗರದಲ್ಲಿ ಮಾನವೀಯತೆಯ ಅಪರೂಪದ ದೃಶ್ಯ ಕಂಡು ಬಂತು.

ಶ್ವಾಸಕೋಶದ ಗಂಭೀರ ಸೋಂಕಿನಿಂದ ಬಳಲುತ್ತಿದ್ದ ಅನ್ವಿಕಾಳಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ, ದಾವಣಗೆರೆಯ ಬಾಪೂಜಿ ಮಕ್ಕಳ ಆಸ್ಪತ್ರೆಯಿಂದ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ಜಿರೋ ಟ್ರಾಫಿಕ್ ವ್ಯವಸ್ಥೆಯಡಿ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಯಿತು.

ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದ ಹನುಮೇಶ್ ಹಾಗೂ ಪವಿತ್ರಾ ದಂಪತಿಯ ಪುತ್ರಿಯಾಗಿರುವ ಅನ್ವಿಕಾ, ಹೆರಿಗೆಗಾಗಿ ತಾಯಿ ಪವಿತ್ರಾ ಹರಿಹರದಲ್ಲಿರುವ ತವರು ಮನೆಗೆ ಬಂದಿದ್ದರು. ಮೂರು ತಿಂಗಳ ಹಿಂದೆ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಗು ಜನಿಸಿತ್ತು. ಕಳೆದ ಕೆಲವು ದಿನಗಳಿಂದ ಅನ್ವಿಕಾ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು, ಕಳೆದ ಒಂದು ವಾರದಿಂದ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಆದರೆ ಮಗುವಿನ ಆರೋಗ್ಯ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದರು.

ಮಗುವಿನ ಜೀವ ಉಳಿಸುವ ಹೊಣೆ ಹೊತ್ತ ವೈದ್ಯರು ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು. ದಾವಣಗೆರೆ ನಗರ ಸಂಚಾರಿ ಪೊಲೀಸ್ ವಿಭಾಗವೂ ಕ್ಷಣಮಾತ್ರವೂ ವಿಳಂಬ ಮಾಡದೇ ಜಿರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿತು.

ಸಂಚಾರಿ ಪೊಲೀಸ್ ಪಿಎಸ್‌ಐ ಶೈಲಜಾ ಅವರ ನೇತೃತ್ವದಲ್ಲಿ ಸುಮಾರು 25 ಪೊಲೀಸ್ ಸಿಬ್ಬಂದಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಿ,
ಆಂಬ್ಯುಲೆನ್ಸ್‌ಗೆ ಅಡೆತಡೆ ಇಲ್ಲದ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಆಂಬ್ಯುಲೆನ್ಸ್ ದಾವಣಗೆರೆಯಿಂದ ಹೊರಟು ಮಲೇಬೆನ್ನೂರು, ಹೊನ್ನಾಳಿ, ನ್ಯಾಮತಿ, ಸವಳಂಗ, ಆಯನೂರು, ಹಣಗೇರೆಕಟ್ಟೆ, ಬೆಜ್ಜೋಳಿ, ತೀರ್ಥಹಳ್ಳಿ, ಆಗುಂಬೆ ಹಾಗೂ ಹೆಬ್ರಿ ಮಾರ್ಗವಾಗಿ ಸುಮಾರು 240 ಕಿ.ಮೀ. ದೂರದ ಮಣಿಪಾಲ ತಲುಪಲಿದೆ. ಸುಮಾರು ನಾಲ್ಕು ಗಂಟೆಗಳ ಪ್ರಯಾಣದ ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ಮಣಿಪಾಲ ಆಸ್ಪತ್ರೆಗೆ ತಲುಪುವ ನಿರೀಕ್ಷೆಯಿದೆ.

ಆಂಬ್ಯುಲೆನ್ಸ್ ಚಾಲಕ ಅನಿಲ್, ‘ಮಗುವಿನ ಸ್ಥಿತಿ ಗಂಭೀರವಾಗಿರುವ ಕಾರಣ ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತಲುಪಿಸುವುದೇ ನಮ್ಮ ಗುರಿ. ಪೊಲೀಸ್ ಇಲಾಖೆ ನೀಡಿದ ಜಿರೋ ಟ್ರಾಫಿಕ್ ವ್ಯವಸ್ಥೆ ಅಮೂಲ್ಯ ಸಹಕಾರವಾಗಿದೆ’ ಎಂದು ತಿಳಿಸಿದರು.

ಜೀವಕ್ಕಾಗಿ ಸಮಯದ ವಿರುದ್ಧದ ಹೋರಾಟ: ಸೈರನ್ ಮೊಳಗಿಸುತ್ತಾ ವೇಗವಾಗಿ ಚಲಿಸಿದ ಆಂಬ್ಯುಲೆನ್ಸ್, ಅದರೊಳಗೆ ಉಸಿರಿಗಾಗಿ ಹೋರಾಡುತ್ತಿದ್ದ ಮೂರು ತಿಂಗಳ ಕಂದಮ್ಮ, ಆತಂಕದಿಂದ ಕಣ್ಣೀರಿಡುತ್ತಿದ್ದ ಪೋಷಕರು, ಹೊರಗೆ ದಾರಿ ಬಿಡುತ್ತಿದ್ದ ವಾಹನ ಸವಾರರು ಮತ್ತು ಜೀವ ಉಳಿಸಲು ಒಗ್ಗಟ್ಟಿನಿಂದ ಶ್ರಮಿಸಿದ ವೈದ್ಯರು ಹಾಗೂ ಪೊಲೀಸರು ಇವೆಲ್ಲವೂ ಮಾನವೀಯತೆಯ ಜೀವಂತ ಚಿತ್ರಣವಾಗಿ ಮೂಡಿ ಬಂದವು.

ಪ್ರತಿ ಕ್ಷಣವೂ ಅಮೂಲ್ಯವಾಗಿದ್ದ ಈ ಪ್ರಯಾಣದಲ್ಲಿ, ಸಮಯದ ವಿರುದ್ಧದ ಹೋರಾಟವೇ ಅನ್ವಿಕಾಳ ಬದುಕಿನ ಆಶಾಕಿರಣವಾಗಿದೆ. ದಾರಿ ತೆರವುಗೊಳಿಸಿದ ಪ್ರತಿಯೊಬ್ಬ ವಾಹನ ಸವಾರನ ಸಹಕಾರವೂ ಒಂದು ಜೀವ ಉಳಿಸುವ ಪ್ರಯತ್ನಕ್ಕೆ ಕೈಜೋಡಿಸಿದಂತಾಯಿತು.