SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಕ್ರಿಮಿನಲ್‌ಗಳ ಜತೆ ಶಾಮೀಲಾದ ಪೊಲೀಸರ ವಿರುದ್ಧ ಕಠಿಣ ಕ್ರಮ

ಕ್ರಿಮಿನಲ್‌ಗಳ ಜತೆ ಶಾಮೀಲಾದ ಪೊಲೀಸರ ವಿರುದ್ಧ ಕಠಿಣ ಕ್ರಮ

0
154

ದಾವಣಗೆರೆ: ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುವ ಪೊಲೀಸ್ ಅಧಿಕಾರಿಗಳು ಅಥವಾ ಸಿಬ್ಬಂದಿಯೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಅಥವಾ ಕ್ರಿಮಿನಲ್‌ಗಳೊಂದಿಗೆ ಶಾಮೀಲಾಗುವುದು ಸಹಿಸಲಾಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ. ಎ.ಎಂ. ಸಲೀಂ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪಗಳು ಇಲಾಖೆಯ ಗಮನಕ್ಕೆ ಬಂದಿವೆ ಎಂದು ಹೇಳಿದರು. ಪೊಲೀಸ್ ಇಲಾಖೆ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಶಿಸ್ತು ಮತ್ತು ಪಾರದರ್ಶಕತೆ ಅತ್ಯಗತ್ಯವಾಗಿದ್ದು, ಕರ್ತವ್ಯ ಲೋಪ ಅಥವಾ ಅಪರಾಧಿಗಳಿಗೆ ಸಹಕಾರ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

₹4.75 ಕೋಟಿ ವಂಚನೆ ಪ್ರಕರಣ ಸಿಐಡಿ ತನಿಖೆಗೆ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗಡಿಗುಡಾಳ ಗ್ರಾಮದ ಶಿವಲಿಂಗಯ್ಯ ಅವರು ದಾಖಲಿಸಿರುವ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಡಿಜಿಪಿ, ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದರು. ದೂರುದಾರರ ಪ್ರಕಾರ, ₹4.75 ಕೋಟಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರೂ, ಅದರಲ್ಲಿ ₹2.68 ಕೋಟಿ ಮಾತ್ರ ದಾಖಲೆಗಳಲ್ಲಿ ತೋರಿಸಿ ಉಳಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದು, ತನಿಖೆಯಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಸಲೀಂ ಹೇಳಿದರು.

ಸೈಬರ್ ಅಪರಾಧ ಮತ್ತು ಡ್ರಗ್ಸ್ ಜಾಲ ದೊಡ್ಡ ಸವಾಲು : ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಸೈಬರ್ ಅಪರಾಧಗಳು, ಮಾದಕ ದ್ರವ್ಯ ಜಾಲ, ಸಂಘಟಿತ ಅಪರಾಧಗಳು ಹಾಗೂ ಆರ್ಥಿಕ ವಂಚನೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪೊಲೀಸ್ ಇಲಾಖೆ ಈಗಿನಿಂದಲೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಈ ರೀತಿಯ ಆಧುನಿಕ ಅಪರಾಧಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಎಲ್ಲಾ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಲಾಗಿದ್ದು, ತಂತ್ರಜ್ಞಾನ ಆಧಾರಿತ ತನಿಖೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

‘ಪೊಲೀಸ್ ಗೃಹ–2025’ ಯೋಜನೆಗೆ ವೇಗ : ಪೊಲೀಸ್ ಸಿಬ್ಬಂದಿಗೆ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿರುವ ‘ಪೊಲೀಸ್ ಗೃಹ–2025’ ಯೋಜನೆಯ ಆರನೇ ಹಂತದ ಕಾಮಗಾರಿಗಳು ಶೀಘ್ರದಲ್ಲೇ ಆರಂಭವಾಗಲಿವೆ ಎಂದು ಡಿಜಿಪಿ ಮಾಹಿತಿ ನೀಡಿದರು. ದಾವಣಗೆರೆ ಜಿಲ್ಲೆಯಲ್ಲೂ ಪೊಲೀಸ್ ಸಿಬ್ಬಂದಿಗೆ ಹೊಸ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದ್ದು, ಜಿಲ್ಲಾ ಐಜಿಪಿ ಹಾಗೂ ಎಸ್‌ಪಿ ನಿವಾಸಗಳಿಗಾಗಿ ಅಗತ್ಯ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ. ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.

ಜನರ ವಿಶ್ವಾಸ ಉಳಿಸಿಕೊಳ್ಳಲು ಪಾರದರ್ಶಕತೆ ಅಗತ್ಯ : ಪೊಲೀಸ್ ಇಲಾಖೆ ಮೇಲೆ ಸಾರ್ವಜನಿಕರ ವಿಶ್ವಾಸ ಮತ್ತಷ್ಟು ಹೆಚ್ಚಾಗಬೇಕಾದರೆ ಇಲಾಖೆಯ ಕಾರ್ಯವೈಖರಿ ಸಂಪೂರ್ಣ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿರಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಡಾ. ಸಲೀಂ ಸಲಹೆ ನೀಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಸದ್ಯ ಕಾನೂನು ಮತ್ತು ಸುವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದ್ದು, ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಪೂರ್ವ ವಲಯದ ವ್ಯಾಪ್ತಿಯಲ್ಲಿಯೂ ಕಾನೂನು ಸುವ್ಯವಸ್ಥೆ ತೃಪ್ತಿಕರವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೂರ್ವ ವಲಯ ಐಜಿಪಿ ಡಾ. ರವಿಕಾಂತೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಜಿಲ್ಲೆಯ ಎಸ್‌ಪಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.