ಬೆಂಗಳೂರು: ಗಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ನವೀನ್ ಸಜ್ಜು, ಇದೀಗ ನಾಯಕ ನಟನಾಗಿಯೂ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಮೊದಲ ನಾಯಕತ್ವದ ಸಿನಿಮಾ ‘ಲೋ ನವೀನ’ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದು, ಇದೀಗ ಚಿತ್ರದ ಯಶಸ್ಸಿನ ಸಂಭ್ರಮದ ನಡುವೆಯೇ ನವೀನ್ ಸಜ್ಜು ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ.
‘ಲೋ ನವೀನ’ ಸಿನಿಮಾ ಬಿಡುಗಡೆಯಾದ ನಂತರ ವಿಮರ್ಶಕರು ಹಾಗೂ ಸಿನಿಪ್ರಿಯರಿಂದ ಉತ್ತಮ ಮೆಚ್ಚುಗೆ ಪಡೆದಿತ್ತು. ವಿಶೇಷವಾಗಿ ಮೊದಲ ಸಿನಿಮಾದಲ್ಲೇ ನವೀನ್ ಸಜ್ಜು ಅವರ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಸಿನಿಮಾ 50 ದಿನಗಳ ಯಶಸ್ವಿ ಪ್ರದರ್ಶನ ಪೂರ್ಣಗೊಳಿಸಿದ್ದು, ಇದೇ ವೇಳೆ ಅಮೆಜಾನ್ ಪ್ರೈಮ್ ವಿಡಿಯೋ ಓಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಚಿತ್ರತಂಡದ ಸಂತಸವನ್ನು ಹೆಚ್ಚಿಸಿದೆ.
ಈ ಎಲ್ಲ ಸಂತಸದ ನಡುವೆ, ಇಂದು (ಜುಲೈ 27ರಂದು) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನವೀನ್ ಸಜ್ಜು, ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನವೇ ಹೊಸ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ.
ಈ ಹೊಸ ಚಿತ್ರವನ್ನು ‘ಸೀಸರ್’ ಹಾಗೂ ‘ಹಂಟರ್’ ಸಿನಿಮಾಗಳ ನಿರ್ದೇಶಕ ವಿನಯ್ ಕೃಷ್ಣ ನಿರ್ದೇಶಿಸಲಿದ್ದಾರೆ. ಆ್ಯಕ್ಷನ್ ಹಾಗೂ ಮನರಂಜನೆಯ ಅಂಶಗಳನ್ನು ಒಳಗೊಂಡ ಕಥಾಹಂದರದೊಂದಿಗೆ ಸಿನಿಮಾ ಮೂಡಿಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಿತ್ರವನ್ನು ಶ್ರೀ ರಂಗ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಉದಯ್ ಕುಮಾರ್ ಎಸ್.ಟಿ ಹಾಗೂ ಅರುಣ್ ಕುಮಾರ್ ಸಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಸದ್ಯ ಪೂರ್ವ ತಯಾರಿ ಕೆಲಸಗಳು ನಡೆಯುತ್ತಿದ್ದು, ಆಷಾಢ ಮಾಸ ಮುಗಿದ ನಂತರ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
‘ಲೋ ನವೀನ’ ಚಿತ್ರದ ಮೂಲಕ ನಟನಾಗಿ ಉತ್ತಮ ಆರಂಭ ಪಡೆದಿರುವ ನವೀನ್ ಸಜ್ಜು, ತಮ್ಮ ಎರಡನೇ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಶೀರ್ಷಿಕೆ, ನಾಯಕಿ ಹಾಗೂ ಇತರ ಕಲಾವಿದರ ಕುರಿತು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಚಿತ್ರತಂಡ ಬಹಿರಂಗಪಡಿಸುವ ನಿರೀಕ್ಷೆಯಿದೆ.
- AI ಕಿಕ್ ರೆಟ್ರೋ ಲುಕ್: ಹಳೇ ನೆನಪುಗಳೊಂದಿಗೆ ಮರುಕಳಿಸಿದ ಆ ದಿನಗಳು!
- ವೈಯಕ್ತಿಕ ದ್ವೇಷದಿಂದ ರಾಜಣ್ಣಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ತಪ್ಪಿಸಲಾಗಿದೆ: ಜೋಶಿ
- ಬೆಂಗಳೂರಿಗರಿಗೆ ಗುಡ್ನ್ಯೂಸ್: BMTC 2.0 ಆ್ಯಪ್ ಲೋಕಾರ್ಪಣೆ, ಪ್ರಯಾಣ ಇನ್ನಷ್ಟು ಸ್ಮಾರ್ಟ್
- ರಾಜ್ಯಪಾಲರನ್ನು ಭೇಟಿಯಾದ ಶ್ರೀ ಅಮರನಾಥೇಶ್ವರ ಮಠದ ಪೀಠಾಧಿಪತಿ
- ಸಚಿವರ ಕುರ್ಚಿಗಿಂತ ಕಾರ್ಮಿಕರ ಸಾಲೇ ದೊಡ್ಡದು! : ಸಚಿವ ಬಸವಂತಪ್ಪ





















