ನವದೆಹಲಿ: ವಿದ್ಯಾರ್ಥಿ ಚಳವಳಿಗೆ ನಾಂದಿ ಹಾಡಿದ ಕಾಕ್ರೋಚ್ ಜನತಾ ಪಾರ್ಟಿಯ ನೀಟ್ ಪ್ರಶ್ನೆ ಪತ್ರಿಕೆ ಹೋರಾಟವು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೊಂದಿಗೆ ಅಂತ್ಯಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ.
ಇ-20 ಪೆಟ್ರೋಲ್ ಬಗ್ಗೆ ಅತ್ಯುಗ್ರ ಹೇಳಿಕೆ ನೀಡುತ್ತಿರುವ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಇನ್ನೂ ಹಲವರನ್ನು ಹೋರಾಟದ ಗುರಿಯಾಗಿರಿಸುವ ಪ್ರಯತ್ನಗಳು ನಡೆದಿವೆ.
ದೇಶದಲ್ಲಿ ಪೆಟ್ರೋಲಿಯಂ ಸರಬರಾಜಿನ ಬಗ್ಗೆ ಬಹಳ ಸಮಯದಿಂದ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿರುವ ಸಚಿವ ನಿತಿನ್ ಗಡ್ಕರಿ ವಿರುದ್ಧ ಈಗಾಗಲೇ ಚಳುವಳಿ ಪ್ರಾರಂಭವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣ ಮಾಡುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದೆ.
ಸರ್ಕಾರದ ನೀತಿಯನ್ನು ಬೆಂಬಲಿಸುತ್ತಿರುವ ಗಡ್ಕರಿ ಸಾರ್ವತ್ರಿಕ ಅಭಿಪ್ರಾಯಗಳನ್ನು ತಿರಸ್ಕರಿಸುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಇ-20 ಬಹು ಉಪಯುಕ್ತ ಎಂದವರು ಹೇಳುತ್ತಿದ್ದಾರೆ. ಆದರೆ ಪೆಟ್ರೋಲ್‌ನಲ್ಲಿ ಶೇ. 20ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡುವ ಬಗ್ಗೆ ಅವರ ಇತ್ತೀಚಿನ ಹೇಳಿಕೆ ಅವರಿಗೇ ತಿರುಗುಬಾಣವಾಗಿದೆ.
ಭಾರತದಲ್ಲಿ ಸರಬರಾಜಾಗುತ್ತಿರುವ ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿರುದ್ಧ ಪ್ರತಿಭಟನೆಯಾಗಿ ಕ್ಯಾಬ್ ಚಾಲಕರ ಒಕ್ಕೂಟವು ಆಗಸ್ಟ್ 4 ರಂದು ಸಂಸತ್ ಚಲೋ ನಡೆಸಲು ಈಗಾಗಲೇ ಸಿದ್ಧತೆ ಆರಂಭಿಸಿದೆ.
ಇದು ಸರ್ಕಾರಕ್ಕೆ ಮತ್ತೊಮ್ಮೆ ತೀವ್ರ ಹೊಡೆತ ನೀಡುವ ಸಾಧ್ಯತೆಗಳಿವೆ. ಈ ಪ್ರತಿಭಟನೆಯಲ್ಲಿ ಪೆಟ್ರೋಲಿಯಂ ಸಚಿವ ಹರ್ಷದೀಪ್ ಸಿಂಗ್ ಪುರಿ ಅವರೂ ಗುರಿಯಾಗುವ ಸಾಧ್ಯತೆ ಇದೆ. ಏಕೆಂದರೆ ಎಥೆನಾಲ್ ಮಿಶ್ರಣದ ವೈಫಲ್ಯವೂ ಅವರ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಇ20 ಕ್ರಾಂತಿ ನಿಜವಾಗಿಯೂ ಮುಂದುವರಿದರೆ, ಮುಂದಿನ ದಿನಗಳಲ್ಲಿ ಅವರೂ ತೀವ್ರ ವಿರೋಧ ಎದುರಿಸಬೇಕಾಗುತ್ತದೆ.




















