SK Home Ad
Home ಸುದ್ದಿ ರಾಜ್ಯ ಚುನಾವಣೆಗೆ ಸಿದ್ದರಾಮಯ್ಯ ಗುಡ್‌ ಬೈ: ಜನ ನಾಯಕನಾಗಿ ಜೈ!

ಚುನಾವಣೆಗೆ ಸಿದ್ದರಾಮಯ್ಯ ಗುಡ್‌ ಬೈ: ಜನ ನಾಯಕನಾಗಿ ಜೈ!

0
114

2028ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ; ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ: ಸಿದ್ದರಾಮಯ್ಯ

ಮಂಡ್ಯ/ ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಹತ್ವದ ಘೋಷಣೆ ಮಾಡಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಿಯೇ ಮುಂದುವರಿದು ಜನರ ಪರವಾಗಿ ಧ್ವನಿಯಾಗುತ್ತೇನೆ ಎಂದು ಸ್ಪಷ್ಟಪಡಿಸಿರುವ ಅವರು, ರಾಜಕೀಯ ಕ್ಷೇತ್ರದಲ್ಲಿ ಹಣದ ಪ್ರಭಾವ ಹೆಚ್ಚುತ್ತಿರುವುದು ಮತ್ತು ರಾಜಕಾರಣ ಕಲುಷಿತಗೊಂಡಿರುವುದು ತಮ್ಮ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಇತ್ತಿಚೆಗೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಳಿಕ ಇದೇ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೇಂದ್ರ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಪ್ರಲ್ಹಾದ್ ಜೋಶಿ

“ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದುಕೊಂಡಿದ್ದೇನೆ” : ತಮ್ಮ ಪೋಸ್ಟ್‌ನಲ್ಲಿ ಸಿದ್ದರಾಮಯ್ಯ ಅವರು, ವರುಣ ಕ್ಷೇತ್ರದ ಜನರು ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ತಾವು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

“ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕ್ಷೇತ್ರದ ಜನರೇ ನಮಗೆ ಹಣ ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಈಗ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅಭ್ಯರ್ಥಿಗಳೇ ಜನರಿಗೆ ಹಣ ನೀಡಬೇಕಾದ ಸ್ಥಿತಿ ಬಂದಿದೆ. ರಾಜಕೀಯ ಸಾಕಷ್ಟು ಕಲುಷಿತವಾಗಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲವೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ,” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಮನ್ ಕಿ ಬಾತ್’: ಕಾರ್ಗಿಲ್ ಯೋಧರಿಗೆ ನಮನ – ಜಲ ಸಂರಕ್ಷಣೆಗೆ ಕರೆ

ವಯಸ್ಸು ಮತ್ತು ಆರೋಗ್ಯವೂ ನಿರ್ಧಾರಕ್ಕೆ ಕಾರಣ : ಪ್ರಸ್ತುತ ತಮ್ಮ ವಯಸ್ಸು 79 ವರ್ಷವಾಗಿದ್ದು, ಸರ್ಕಾರದ ಅವಧಿ ಪೂರ್ಣಗೊಳ್ಳುವ ವೇಳೆಗೆ 81–82 ವರ್ಷವಾಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. “ಈಗಿನಷ್ಟು ಆರೋಗ್ಯ ಮತ್ತು ಉತ್ಸಾಹ ಆಗ ಇರುವುದಿಲ್ಲ. ಹಿಂದಿನ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದಿರಬಹುದು. ಆದ್ದರಿಂದ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ಬಗ್ಗೆ ತೀರ್ಮಾನಿಸಿದ್ದೇನೆ,” ಎಂದು ಅವರು ಹೇಳಿದ್ದಾರೆ.

50 ವರ್ಷಗಳ ರಾಜಕೀಯ ಪಯಣ : 1978ರಲ್ಲಿ ತಾಲೂಕು ಮಂಡಳಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಸಿದ್ದರಾಮಯ್ಯ, 2028ರ ವೇಳೆಗೆ ತಮ್ಮ ರಾಜಕೀಯ ಜೀವನಕ್ಕೆ 50 ವರ್ಷಗಳು ಪೂರ್ಣಗೊಳ್ಳಲಿವೆ ಎಂದು ನೆನಪಿಸಿಕೊಂಡಿದ್ದಾರೆ. “ಈ ಐದು ದಶಕಗಳ ರಾಜಕೀಯ ಜೀವನದಲ್ಲಿ ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಆದರೆ ನಾನು ನಂಬಿದ ಸಿದ್ಧಾಂತಗಳಿಗೆ ವಿರುದ್ಧವಾಗಿ ಎಂದಿಗೂ ನಡೆದುಕೊಂಡಿಲ್ಲ. ಆತ್ಮಸಾಕ್ಷಿಗೆ ದ್ರೋಹ ಮಾಡಿಲ್ಲ ಎಂಬ ತೃಪ್ತಿ ನನಗಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಐರನ್ ಮ್ಯಾನ್ ಟು ಡಾಕ್ಟರ್ ಡೂಮ್: ‘ಅವೆಂಜರ್ಸ್’ ಪೋಸ್ಟರ್ ವೈರಲ್!

ಜನಸೇವೆ ಮುಂದುವರಿಯಲಿದೆ : ಚುನಾವಣಾ ರಾಜಕೀಯದಿಂದ ಹಿಂದೆ ಸರಿದರೂ ಸಾರ್ವಜನಿಕ ಬದುಕಿನಿಂದ ದೂರವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ಜನರ ಸಮಸ್ಯೆಗಳು, ಕಷ್ಟ-ಸುಖಗಳಿಗೆ ಧ್ವನಿಯಾಗಿಯೇ ಮುಂದುವರಿಯುವುದಾಗಿ ತಿಳಿಸಿದ್ದಾರೆ. “ರಾಜ್ಯದ ಜನರು ಐದು ದಶಕಗಳ ಕಾಲ ನನ್ನನ್ನು ತಮ್ಮ ಮನೆಯ ಸದಸ್ಯನಂತೆ ಕಂಡು ಪ್ರೀತಿಸಿದ್ದಾರೆ. ಅವರ ಈ ಪ್ರೀತಿ ಮತ್ತು ವಿಶ್ವಾಸದ ಋಣ ನನ್ನ ಮೇಲಿದೆ. ಹೀಗಾಗಿ ನನ್ನ ಮುಂದಿನ ಜೀವನವನ್ನೂ ಜನಸೇವೆಗೆ ಸಮರ್ಪಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾದ ಘೋಷಣೆ : ಸಿದ್ದರಾಮಯ್ಯ ಅವರ ಈ ಘೋಷಣೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಅವರ ನಿರ್ಧಾರ ಕಾಂಗ್ರೆಸ್ ಪಕ್ಷದ ಭವಿಷ್ಯದ ನಾಯಕತ್ವ, ಚುನಾವಣಾ ತಂತ್ರ ಹಾಗೂ ರಾಜ್ಯ ರಾಜಕೀಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಈಗಾಗಲೇ ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.