SK Home Ad
Home ಸುದ್ದಿ ದೇಶ ಭದ್ರತಾ ಭೀತಿ: GitHubನಿಂದ BitChat App ತೆರವಿಗೆ ಕೇಂದ್ರ ಸೂಚನೆ

ಭದ್ರತಾ ಭೀತಿ: GitHubನಿಂದ BitChat App ತೆರವಿಗೆ ಕೇಂದ್ರ ಸೂಚನೆ

0
77

ನವದೆಹಲಿ : ಮಾಜಿ ಟ್ವಿಟರ್ (ಈಗಿನ X) ಸಿಇಒ ಜ್ಯಾಕ್ ಡೋರ್ಸೆ ಅಭಿವೃದ್ಧಿಪಡಿಸಿರುವ BitChat ಬ್ಲೂಟೂತ್ ಆಧಾರಿತ ಮೆಸೇಜಿಂಗ್ ಅಪ್ಲಿಕೇಶನ್ ಕುರಿತು ಕೇಂದ್ರ ಸರ್ಕಾರ ಭದ್ರತಾ ಆತಂಕ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C), ಮೈಕ್ರೋಸಾಫ್ಟ್ ಒಡೆತನದ GitHub ವೇದಿಕೆಯಿಂದ BitChat ಸಂಬಂಧಿತ ಮೂಲಸಂಕೇತ (Source Code) ಮತ್ತು ಯೋಜನೆಯನ್ನು ತೆಗೆದುಹಾಕುವಂತೆ ನಿರ್ದೇಶನ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಗದಗ: RDPR ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

ಸರ್ಕಾರದ ಪ್ರಕಾರ, ಇಂಟರ್ನೆಟ್ ಸಂಪರ್ಕವಿಲ್ಲದೆ ಬ್ಲೂಟೂತ್ ಮೆಶ್ ನೆಟ್‌ವರ್ಕ್ ಮೂಲಕ ಸಂದೇಶಗಳನ್ನು ರವಾನಿಸಬಹುದಾದ BitChat ಮಾದರಿಯ ಅಪ್ಲಿಕೇಶನ್‌ಗಳನ್ನು ಭಯೋತ್ಪಾದಕ ಸಂಘಟನೆಗಳು, ಸಂಘಟಿತ ಅಪರಾಧ ಜಾಲಗಳು ಹಾಗೂ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಗುಂಪುಗಳು ಕಾನೂನುಬದ್ಧ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಇದೇ ಕಾರಣದಿಂದ ಈ ತಂತ್ರಜ್ಞಾನದ ಕುರಿತು ಭದ್ರತಾ ಸಂಸ್ಥೆಗಳು ಗಂಭೀರ ಕಳವಳ ವ್ಯಕ್ತಪಡಿಸಿವೆ.

ವರದಿಗಳ ಪ್ರಕಾರ, ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲವು ಪ್ರತಿಭಟನಾಕಾರರು ಇಂಟರ್ನೆಟ್ ನಿರ್ಬಂಧಗಳ ನಡುವೆಯೂ ಬ್ಲೂಟೂತ್ ಆಧಾರಿತ ಸಂದೇಶ ವಿನಿಮಯ ಅಪ್ಲಿಕೇಶನ್‌ಗಳನ್ನು ಬಳಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಬೆಳವಣಿಗೆಯ ಬಳಿಕ BitChat ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: UGNEET: KEA ಮಹತ್ವದ ಪ್ರಕಟಣೆ – ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಜ್ಯಾಕ್ ಡೋರ್ಸೆ, ಜುಲೈ 23ರಂದು ಭಾರತ ಸರ್ಕಾರದಿಂದ ಬಂದಿರುವ ನೋಟಿಸ್‌ನ ಪ್ರತಿಯನ್ನು ಸಾಮಾಜಿಕ ಜಾಲತಾಣ Xನಲ್ಲಿ ಹಂಚಿಕೊಂಡಿದ್ದಾರೆ. “ಭಾರತ ಸರ್ಕಾರವು BitChat ಮಾದರಿಯ ತಂತ್ರಜ್ಞಾನಗಳನ್ನು ಇಷ್ಟಪಡುವುದಿಲ್ಲ ಮತ್ತು ಅದನ್ನು ತೆಗೆದುಹಾಕಲು ಬಯಸುತ್ತಿದೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ.